ಮಂಗಳೂರು, ಆ. 20(DaijiworldNews/HR): ಶಾಸಕರು ಮತ್ತು ಸಂಸದರು ವರ್ತಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಜಿಲ್ಲಾಡಳಿತ ಕೊರೊನಾ ಲಾಕ್ ಡೌನ್ ನಿಂದ ಸಾಮಾಜಿಕ ನೆಪ ಹೇಳಿ 597 ವರ್ತಕರನ್ನು ಬೀದಿಗೆ ಹಾಕಲು ನೋಡುತ್ತಿದ್ದಾರೆ. ಇದನ್ನು ಶಾಸಕರು ಸಂಸದರು ನೋಡಿ ಮಾನವೀಯತೆ ಮೆರೆಯಿರಿ. ಕೇಂದ್ರ ಮಾರುಕಟ್ಟೆಗೆ ನೀರು ಮತ್ತು ವಿದ್ಯುತ್ ಸರಬರಾಜು ನೀಡಿ ಇಲ್ಲವಾದಲ್ಲಿ ಇದರ ವಿರುದ್ದ ದ್ವನಿ ಎತ್ತಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯ್ ರಾಜ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಾರುಕಟ್ಟೆಯಲ್ಲಿ 597 ವರ್ತಕರು ವ್ಯಾಪಾರ ಮಾಡುತ್ತಿದ್ದು, ಅನೇಕ ಕುಟುಂಬ ಇವರನ್ನು ಆಶ್ರಯಿಸಿದೆ. ಅದಲ್ಲದೆ ಅನೇಕ ಕೂಲಿ ಕಾರ್ಮಿಕರು, ಟೆಂಪೋ, ಅಟೋ ಚಾಲಕರ ಸಹಿತ ಸಾವಿರಾರು ಮಂದಿ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಈ ಮಾರುಕಟ್ಟೆ ಸ್ಮಾರ್ಟ್ಸಿಟಿಯಡಿ ಉತ್ತಮವಾಗಿ ನಿರ್ಮಾಣವಾಗಬೇಕು ಎಂದು ಮನಪಾದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ತೀರ್ಮಾನಿಸಿತ್ತು. ಆದರೆ ಈಗ ಇರುವ ಬಿಜೆಪಿ ಆಡಳಿತ ಜಿಲ್ಲಾಧಿಕಾರಿಯನ್ನು ಬಳಸಿಕೊಂಡು ಮಾರುಕಟ್ಟೆ ವಿಚಾರದಲ್ಲಿ ವರ್ತಕರಿಗೆ ವಿರುದ್ಧವಾಗಿ ವರ್ತಿಸಿದೆ ಎಂದು ವಿನಯ್ರಾಜ್ ಟೀಕಿಸಿದರು.
ಇನ್ನು ಕೇಂದ್ರ ಮಾರುಕಟ್ಟೆ ವಿಚಾರದಲ್ಲಿ ನ್ಯಾಯಾಲಯದ ಆದೇಶ ವರ್ತಕರ ಪರ ಇರುವಾಗ ಜಿಲ್ಲಾಧಿಕಾರಿಗೆ ಮಾರುಕಟ್ಟೆ ಬಂದ್ ಮಾಡಲು ಅದೇಶ ನೀಡುವಂತಿಲ್ಲ. ಆದರೆ ನಮ್ಮ ಶಾಸಕ ವೇದವ್ಯಾಸ್ ಕಾಮತ್, ಸಂಸದ ನಳಿನ್ಕುಮಾರ್ ಕಟೀಲ್ ಹಾಗೂ ಮಂಗಳೂರಿನ ಓರ್ವ ಬಿಲ್ಡರ್ ನ ಆದೇಶವನ್ನು ಮನಪಾ ಪಾಲನೆ ಮಾಡುತ್ತಿದೆ ಆರೋಪಿಸಿದ್ದಾರೆ.
ಕಾಂಗ್ರೆಸ್ ಅವಧಿಯ ಸಂದರ್ಭದಲ್ಲಿ ಜಪ್ಪು, ಕಂಕನಾಡಿ, ಕದ್ರಿ, ಉರ್ವ ಮಾರುಕಟ್ಟೆ ಸುಸಜ್ಜಿತ ತಾತ್ಕಾಲಿಕ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡಿ ವರ್ತಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಆದರೆ ಇದೀಗ ಬಿಜೆಪಿಗೆಯವರಿಗೆ ಇದರ ಬಗ್ಗೆ ಅರಿವಾಗಿಲ್ಲ. ಆದ ಕಾರಣ ಇವರಿಗೆ ಅಧಿಕಾರ ನಡೆಸಲು ಗೊತ್ತಿಲ್ಲದಿದ್ದರೆ ಪ್ರತಿಪಕ್ಷವಾಗಿ ನಾವು ಸಲಹೆ, ಸೂಚನೆಗಳನ್ನು ನೀಡುತ್ತೇವೆ ಎಂದು ಹೇಳಿದರು.
ಇನ್ನು ಕೇಂದ್ರ ಮಾರುಕಟ್ಟೆಯ ವಿಚಾರದಲ್ಲಿ ಎಪಿಎಂಸಿ ಅಧ್ಯಕ್ಷರು ಮಾತನಾಡಿದ್ದಾರೆ. ಅದರೆ ಈ ಮಾರುಕಟ್ಟೆ ಮಂಗಳೂರು ನಗರ ಪಾಲಿಕೆ ಅಧೀನದಲ್ಲಿದೆಯೇ ಅಥವಾ ಎಪಿಎಂಸಿ ಅಧೀನದಲ್ಲಿದೆಯೇ ಎನ್ನುವ ಬಗ್ಗೆ ಮನಪಾ ಸ್ಪಷ್ಟೀಕರಣ ನೀಡಬೇಕಿದೆ ಎಂದು ಹೇಳಿದ್ದಾರೆ.