ಬೆಳಗಾವಿ, ಏ 29: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭ್ರಮೆಯಲ್ಲಿ ಹಗಲು ಕನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡುತ್ತಾ, ಜೈಲಿಗೆ ಹೋಗಿ ಬಂದಿರುವ ಕಳಂಕಿತ ವ್ಯಕ್ತಿ ಯಡಿಯೂರಪ್ಪ, ರೆಡ್ಡಿ ಸಹೋದರರಿರುವ ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ, ಇಂತಹ ಜನಗಳನ್ನು ರಾಜ್ಯದ ಜನ ಬೆಂಬಲಿಸೋದು ಇಲ್ಲ, ಆದರೂ ಯಡಿಯೂರಪ್ಪ ಹಗಲು ಕನಸು ಕಾಣೋದನ್ನು ಬಿಡೋದಿಲ್ಲ ಎಂದು ಟೀಕೆ ಮಾಡಿದರು.
ಮುಖ್ಯಮಂತ್ರಿ ಪದವಿಯ ಕನಸು ಕಾಣುತ್ತಾ ಅಧಿಕಾರಕ್ಕೆ ಬಂದರೆ ನನ್ನನ್ನು 24 ಗಂಟೆಯಲ್ಲಿ ಕಳುಹಿಸುತ್ತೇನೆ ಎನ್ನುವ ಯಡಿಯೂರಪ್ಪ, ಅದೇ ದಾಖಲೆ ಹಿಡಿದುಕೊಂಡು ಯಡಿಯೂರಪ್ಪ , ಲೋಕಾಯುಕ್ತ , ಎಸಿಬಿಗೋ ಅಥವಾ ನ್ಯಾಯಾಲಯಕ್ಕೋ ದೂರು ಕೊಡುವ ಕೆಲಸವನ್ನೇಕೆ ಮಾಡುವುದಿಲ್ಲ ಎಂದು ಸವಾಲು ಹಾಕಿದರು. ಇದೇ ವೇಳೆ ರಾಜ್ಯದಲ್ಲಿ ಭೇಟಿ ನೀಡಿದ ಕಡೆ ಎಲ್ಲಾ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಕಾಂಗ್ರೆಸ್ ಪರವಾದ ಅಲೆ ಇದೆ ಎಂದರು.