ಮಂಗಳೂರು, ಆ 21 (Daijiworld News/MSP): "ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಬುಧವಾರ ಹುಸಿ ಕರೆ ಮಾಡಿದ್ದ ಆರೋಪಿ , ಈ ಹಿಂದೆ ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟಿದ್ದ ಘಟನೆಯಿಂದ ಪ್ರೇರಣೆಗೊಂಡು , ತಾನು ಆರೋಪಿ ಆದಿತ್ಯ ರಾವ್ ನಂತೆ ಪ್ರಸಿದ್ದಿ ಪಡೆಯಬೇಕು ಎಂಬ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾನೆ" ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.


ನಗರದಲ್ಲಿ ಆ.21 ರ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು " ಏರ್ ಪೋರ್ಟ್ ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಉಡುಪಿಯ ಕಾರ್ಕಳ ತಾಲೂಕು ಮುದ್ರಾಡಿಯ ವಸಂತ ಕೃಷ್ಣ ಶೇರಿಗಾರ (33) ಈಗಾಗಲೇ ಬಂಧಿಸಲಾಗಿದ್ದು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ಕೋವಿಡ್ ಸೋಂಕು ಪರೀಕ್ಷೆ ನಡೆಸಬೇಕಾಗಿರುವುದರಿಂದ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪರೀಕ್ಷಾ ವರದಿ ನೆಗೆಟಿವ್ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು" ಎಂದು ಹೇಳಿದ್ದಾರೆ.
"ಬಂಧಿತ ಈ ಹಿಂದೆ, ಬೆಂಗಳೂರಿನ ಹೊಟೇಲ್ ಒಂದರಲ್ಲಿ 3-4 ವರ್ಷ ಕೆಲಸ ಮಾಡುತ್ತಿದ್ದು, ಬಳಿಕ ಉಡುಪಿಯ ಹೊಟೇ್ಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಲಾಕ್ಡೌನ್ ಕಾರಣದಿಂದ ಮನೆಯಲ್ಲಿದ್ದು ಗೂಗಲ್ ಮೂಲಕ ಮಾಜಿ ನಿರ್ದೇಶಕ ಎಂ. ಆರ್. ವಾಸುದೇವ ಮೊಬೈಲ್ ನಂಬರ್ ಪಡೆದುಕೊಂಡು ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಿದ್ದ".
"ತತ್ಕ್ಷಣ ಕಾರ್ಯ ಪ್ರವೃತ್ತರಾದ ಮಂಗಳೂರು ಪೊಲೀಸರು ಉಡುಪಿ ಪೊಲೀಸರ ಸಹಕಾರದಿಂದ ಕರೆ ಬಂದ ನಾಲ್ಕೇ ತಾಸುಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ತಡರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತನ ವಿರುದ್ದ ಈಗಾಗಲೇ ಜಾಮೀನು ರಹಿತ ಸೆಕ್ಷನ್ ನಡಿ ಪ್ರಕರಣ ದಾಖಲಿಸಲಾಗಿದೆ".
ಆರೋಪಿ ವಿಚಾರಣೆ ವೇಳೆ " ಈ ಹಿಂದೆ ನಡೆದ ಬಾಂಬ್ ಘಟನೆಯಿಂದ ಪ್ರೇರಿತನಾಗಿ ತಾನು ಪ್ರಸಿದ್ದನಾಗಬೇಕು ಎಂದು ಹುಸಿ ಕರೆ ಮಾಡಿರುವುದಾಗಿ" ಬಾಯಿಬಿಟ್ಟಿದ್ದಾನೆ ಎಂದು ಆಯುಕ್ತರು ತಿಳಿಸಿದ್ದಾರೆ.