ಉಡುಪಿ, ಆ 21 (Daijiworld News/MSP): ಮೂಡನಿಡಂಬೂರು ಗರಡಿ ಸನಿಹ ಹರಿಯುವ ಇಂದ್ರಾಣಿ ನದಿಯಲ್ಲಿ ಸುಮಾರು 45 ವಯಸ್ಸಿನ ಅಪರಿಚಿತ ಗಂಡಸಿನ ಶವವು ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಕಂಡು ಬಂದಿದೆ.

ವ್ಯಕ್ತಿಯೊರ್ವ ನದಿಯ ದಡದಲ್ಲಿ ನಿಂತು ಗಾಳಗಾರಿಕೆ ನಡೆಸುತ್ತಿರುವಾಗ ಗಾಳದಲ್ಲಿ ಮೀನಿನ ಬದಲು ಶವವು ಸಿಕ್ಕಿ ಕೊಂಡಿದೆ. ಭಯದಿಂದ ದಿಗಿಲುಗೊಂಡ ಗಾಳಗಾರಿಕೆ ನಡೆಸುತ್ತಿದ್ದ ವ್ಯಕ್ತಿಯು ಗಾಳಗಾರಿಕೆಯ ಪರಿಕರಗಳನ್ನು ಬಿಟ್ಟು ದಿಕ್ಕಪಾಲಾಗಿ ಓಡಿ ಹೋದನೆಂದು ತಿಳಿದು ಬಂದಿದೆ.
ವಿಷಯ ತಿಳಿದು ಘಟನಾ ಸ್ಥಳದಲ್ಲಿ ಧಾವಿಸಿ ಬಂದ ನಗರ ಠಾಣಾಧಿಕಾರಿ ಸಕ್ತಿವೇಲು ಈ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಸಿಬ್ಬಂದಿ ಮನೋಹರ್ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನದಿಗಿಳಿದು ಸಾಹಸದ ಕಾರ್ಯಚರಣೆಯ ಮೂಲಕ ಹರಿಯುತ್ತಿರುವ ನದಿಯಿಂದ ಶವನ್ನು ಮೇಲಕ್ಕೆತ್ತಿದ್ದಾರೆ.