ಕುಂದಾಪುರ, ಆ 21 (Daijiworld News/MSP): ಗಣೇಶ ವಿಗ್ರಹ ರಚನೆಯಲ್ಲಿ ಶ್ರದ್ದೆ ಮತ್ತು ಸೃಜನಶೀಲತೆ ಬೇಕು. ಪುರಾಣದ ಬಗ್ಗೆ ಜ್ಞಾನವೂ ಅತ್ಯಗತ್ಯ. ಮೃತ್ತಿಕೆಯ ಗಣೇಶ ವಿಗ್ರಹ ರಚನೆ ಕೆಲವು ಕಲಾವಿದರಿಗೆ ಪರಂಪರೆಯಿಂದ ಬಂದ ಬಳುವಳಿ. ಇಂಥಹ ಓರ್ವ ಗಣೇಶ ವಿಗ್ರಹ ತಯಾರಕರು ರಾಜೇಶ ಗುಡಿಗಾರ್ ಬಸ್ರೂರು.






ಪರಂಪರೆಯನ್ನು ಮುಂದುವರಿಸಿಕೊಂಡು, ಧಾರ್ಮಿಕ ಸೇವೆ ಎಂದು ಪರಿಭಾವಿಸಿ ಗಣೇಶನ ನಿರ್ಮಿಸಿ ಕೊಡುವ ಈ ನಿರ್ಮಾತೃಗಳ ಪೈಕಿ ಕುಂದಾಪುರದಲ್ಲಿ ಅತೀ ಹೆಚ್ಚು ಗಣಪತಿ ವಿಗ್ರಹಗಳನ್ನು ನಿರ್ಮಿಸುವರು ಈ ರಾಜೇಶ ಗುಡಿಗಾರ್ ಬಸ್ರೂರು ಇವರು.
ಈ ಬಾರಿ ಕೊರೋನಾದಿಂದ ಗಣೇಶ ಚತುರ್ಥಿ ಆಚರಣೆಯ ಸುತ್ತೋಲೆ ಬಂದಿದ್ದೇ ಇತ್ತೀಚೆಗೆ. ಆದರೆ ಇವರ ಪ್ರಸಿದ್ಧಿ ಹೇಗಿದೆ ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ಬಾರಿ ರಾಜೇಶ ಗುಡಿಗಾರರು ಕಳೆದ ಬಾರಿಗಿಂತ 3 ಗಣಪತಿ ಹೆಚ್ಚಿಗೆ ಬೇಡಿಕೆ ಬಂದಿದೆಯಂತೆ. ಈ ಬಾರಿ ಅವರು 158 ಗಣಪತಿ ವಿಗ್ರಹಗಳ ರಚನೆ ಮಾಡಿದ್ದಾರೆ. ಕಳೆದ ವರ್ಷ155 ವಿಗ್ರಹಗಳ ತಯಾರಿಸಿದ್ದರು. ಬೇಡಿಕೆ ಆಧಾರದಲ್ಲಿ ಮಾತ್ರ ವಿಗ್ರಹ ತಯಾರಿ ಮಾಡುತ್ತಾರೆ.
ಬಳ್ಕೂರು ನಿವಾಸಿಯಾಗಿರುವ ಇವರು ಬಸ್ರೂರಿನ ಶಿಶು ಮಂದಿರದ ಹತ್ತಿರ ಇವರು ಗಣೇಶ ವಿಗ್ರಹಗಳ ರಚನೆ ಮಾಡುತ್ತಾರೆ. ಪ್ರತೀ ವರ್ಷ ನೂರಕ್ಕೂ ಅಧಿಕ ವಿವಿಧ ಆಕಾರ, ಸ್ವರೂಪಗಳ ಗಣಪತಿಯನ್ನು ರಚಿಸುವ ರಾಜೇಶ ಗುಡಿಗಾರ್ ಅದ್ಬುತ ಕಲಾವಿದ. ಆದರೆ ಇನ್ನೂ ಸುಪ್ತವಾಗಿಯೇ ಇದ್ದಾರೆ.ತಾತನ ಕಾಲದಿಂದಲೂ ಈ ವೃತ್ತಿ ಅನೂಚಾನವಾಗಿ ಮುಂದುವರಿದುಕೊಂಡು ಬಂದಿದೆ.
ಮೋಹನ ಗುಡಿಗಾರ್ ಅವರಿಂದ ಈ ವಿದ್ಯೆ ಸಿದ್ಧಿಸಿಕೊಂಡ ರಾಜೇಶ ಗುಡಿಗಾರ್ ಅವರ ಅಸೀಮ ಆಸಕ್ತಿ, ಈ ಕಲೆಯ ಬಗ್ಗೆ ಇರುವ ಆಸ್ಮಿಯತೆ ಇದರಲ್ಲಿ ಮುಂದುವರಿಯುವಂತೆ ಮಾಡಿದೆ. ರಾಜೇಶ ಗುಡಿಗಾರ್ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ 1993ರಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ನಂತರ ಹೆಲ್ತ್ ಇನ್ಸ್ಪೆಕ್ಟರ್ ಡಿಪ್ಲೋಮ ಮಾಡಿದ್ದಾರೆ. ಬದುಕಿನ ಮುಂದೆ ಸಾಕಷ್ಟು ಅವಕಾಶಗಳು ಇದ್ದರೂ ಕೂಡಾ ಅವರು ಆಯ್ದುಕೊಂಡಿದ್ದು ಮಾತ್ರ ಪರಂಪರೆಯ ಈ ವೃತ್ತಿ. ಮಳೆಗಾಲದಲ್ಲಿ ಗಣೇಶ ವಿಗ್ರಹ ರಚನೆ, ಬೇರೆ ಸಮಯದಲ್ಲಿ ದೈವದ ವಿಗ್ರಹಗಳ ರಚನೆ, ಬಣ್ಣಗಾರಿಕೆ. ದಾರುಶಿಲ್ಪ ಹಾಗೂ ಮೃತ್ತಿಕೆಯಲ್ಲಿ ಅವರು ಅಪೂರ್ವ ಸಿದ್ಧಿ ಪಡೆದಿದ್ದಾರೆ. ಇವರು ತಯಾರಿಸುವ ಗಣಪತಿ ವಿಗ್ರಹಗಳಷ್ಟೆ ದಾರು ಕೆತ್ತನೆಯ ದೈವದ ವಿಗ್ರಹಗಳು ಅಷ್ಟೇ ಪ್ರಸಿದ್ದಿ ಪಡೆದಿದೆ.
ರಾಜೇಶ ಗುಡಿಗಾರ್ ಅವರಲ್ಲಿ ಅಡಕವಾಗಿರುವ ಪ್ರತಿಭೆಯ ಪ್ರಬುದ್ದತೆಯ ಹಿನ್ನೆಲೆ ಅಧ್ಯಾಪನಾ ಮತ್ತು ಸೂಕ್ಷ್ಮ ಗ್ರಾಹಿತ್ವ. ಯಾವುದೇ ವಿಗೃಹ ತಯಾರಿಯ ಬಗ್ಗೆ ಅವರಲ್ಲಿ ಸ್ಪಷ್ಟತೆ ಇರುತ್ತದೆ. ಕಲೆಯ ಬಗೆಗಿನ ತುಡಿತ, ಮರವಿರಲಿ, ಮಣ್ಣು ಇರಲಿ ರಚನೆಯಲ್ಲಿ ಸಚೇತನತೆಗೆ ಅವರು ನೀಡುವ ಒತ್ತು ಗಮನ ಸಳೆಯುತ್ತದೆ. ಸಿದ್ಧ ಮಾದರಿ (ಮೌವ್ಡ್) ಹೆಚ್ಚು ಬಳಕೆ ಮಾಡದೆ ಕುಂಚ ಕಲೆಗೆ ಆದ್ಯತೆ ನೀಡುತ್ತಾರೆ. ಹಾಗಾಗಿಯೇ ಉಡುಪಿ ಜಿಲ್ಲೆಯಲ್ಲಿ ರಾಜೇಶ ಗುಡಿಗಾರ್ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದ್ದಾರೆ.
ಒಬ್ಬ ವ್ಯಕ್ತಿ 158 ಗಣಪತಿಯ ವಿಗ್ರಹ ರಚಿಸುವುದೆಂದರೆ ಸಣ್ಣ ವಿಚಾರವಲ್ಲ. ಇಷ್ಟೂ ಕೂಡಾ ಬೇಡಿಕೆ ಆಧಾರದಲ್ಲಿ ರಚಿಸುವುದೆ ಆಗಿದೆ. ಜೂನ್ ತಿಂಗಳಲ್ಲಿಯೇ ಬೇಡಿಕೆಗಳನ್ನು ಪಡೆದುಕೊಂಡು ಮಣ್ಣಿನೊಂದಿಗೆ ಕಸರತ್ತು ನಡೆಸಲು ಆರಂಭಿಸಿದರೆ ಮೂರು ತಿಂಗಳು , ದಿನದ ಎಂಟು ಗಂಟೆಗೂ ಹೆಚ್ಚುಕಾಲ ಮಣ್ಣಿನೊಡನೆ ಸರಸವಾಡುತ್ತಲೆ ಇರಬೇಕು. ಗಣಪತಿ ವಿಗ್ರಹ ರಚನೆಗೆ ತಾಳ್ಮೆ ಬೇಕು. ಶೃದ್ದೆ ಬೇಕು. ಶೃದ್ದೆ, ತಾಳ್ಮೆ, ಭಕ್ತಿ ಎರಕಗೊಂಡರೆ ನಿರೀಕ್ಷೆಗೂ ಮೀರಿದ ಗಣಪತಿ ಪಡಿಮೂಡಿ ಬರುತ್ತಾನೆ. ಅದನ್ನು ರಾಜೇಶ ಗುಡಿಗಾರ ತಯಾರಿಸುವ ಗಣಪತಿಯಲ್ಲಿ ಕಾಣಬಹುದು.
ಈಗಿನ ಆರ್ಥಿಕ ಸ್ಥಿತಿ ವಿಗ್ರಹಕ್ಕೆ ರಚನೆಗೆ ತಗಲುವ ಸಮಯ, ಆವೆ ಮಣ್ಣಿನ ಬೆಲೆ ನೋಡಿದರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ವಿಗ್ರಹಗಳ ಸಂಭಾವನೆ ಕಡಿಮೆ. ಕೆಲವರು ಚೌಕಾಸಿ ಮಾಡುವವರು ಇರುತ್ತಾರೆ. ವಿಗ್ರಹ ರಚನೆ ದೇವರ ಸೇವೆಯೆಂದು ನಾನು ಭಾವಿಸಿಕೊಂಡಿದ್ದೇನೆ ಎನ್ನುತ್ತಾರೆ ರಾಜೇಶ ಗುಡಿಗಾರ್.
ಪರಿಸರ ಸ್ನೇಹಿ ಬಣ್ಣಗಳ ಬಳಕೆ, ಪುರಾಣದಲ್ಲಿ ಚಿತ್ರಿತ ಗಣಪತಿಯನ್ನೇ ನಿರ್ಮಿಸುವುದು ಇವರ ವಿಶೇಷತೆ. ಸಾಂಪ್ರಾದಾಯಿಕ ಶೈಲಿಯಲ್ಲೇ ಮೂಡಿ ಬಂದಿರುವ 158ಕ್ಕೂ ವಿವಿಧ ಆಕಾರಗಳ ಗಣಪತಿಯನ್ನು ಒರ್ವ ವ್ಯಕ್ತಿ ನಿರ್ಮಿಸುವುದೆಂದರೆ ಸುಲಭದ ವಿಚಾರವಲ್ಲ. ರಾಜೇಶ ಗುಡಿಗಾರರ ಪ್ರತಿಭಾವ್ಯಕ್ತಿಯ ಸೇವಾ ಕಾರ್ಯ ಗುರುತಿಸುವಂತಹದ್ದು. ಸರ್ಕಾರ, ಇಲಾಖೆಗಳು ಇಂಥಹ ಸಾಧಕರನ್ನು ಗುರುತಿಸುವ, ಗೌರವಿಸುವ ಕಾರ್ಯ ಮಾಡಿದರೆ ಕಲೆಗೆ ಬೆಲೆ ಸಿಕ್ಕಂತಾಗುತ್ತದೆ.
ರಾಜೇಶ ಗುಡಿಗಾರ್ ಸಂಪರ್ಕ ಸಂಖ್ಯೆ-7760007701