ಮೂಡುಬಿದಿರೆ, ಆ 21 (DaijiworldNews/PY): ಕಾಡಿನ ದಾರಿಯಲ್ಲಿ ಸಾಗಿ ಅಲ್ಲಿನ ಒಬ್ಬ ವಿದ್ಯಾರ್ಥಿಗೆ ಪಾಠ ಹೇಳಿಕೊಡಲು ಹೋಗುತ್ತಿರುವ ಮೂಡಬಿದಿರೆ ತಾಲೂಕಿನ ಪಣಿಲದ ಶಿಕ್ಷಕಿಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.




ಗ್ರಾಮದ ವ್ಯಾಪ್ತಿಯಲ್ಲಿ ಬೆಟ್ಟದಲ್ಲಿರುವ ವಿದ್ಯಾರ್ಥಿಯೋರ್ವನಿಗೆ ಪಾಠ ಹೇಳಿಕೊಡುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ಪಣಪಿಲ ಗ್ರಾಮದಲ್ಲಿರುವ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರಾದ ಮುಖ್ಯ ಶಿಕ್ಷಕಿ ಸುಜಾತ ಜೈನ್, ಸಹ ಶಿಕ್ಷಕಿಯರಾದ ರಶ್ಮೀ ಭಟ್ ಹಾಗೂ ನವ್ಯಅವರು 10 ಮೀ. ನಡೆದು ಆತನಿಗೆ ಪಾಠ ಹೇಳಿಕೊಡುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪಣಪಿಲ ಗ್ರಾಮದ ಓಂಟೆಕಜೆ ಬೆಟ್ಟದಲ್ಲಿ ಮೂರು ಮಲೆಕುಡಿಯ ಕುಟುಂಬಗಳು ವಾಸಿಸುತ್ತಿದ್ದು, ತಮ್ಮ ಜೀವನ ಸಾಗಿಸಲು ಕೃಷಿ ಕಾರ್ಯವನ್ನ ಮಾಡುತ್ತಿದ್ದಾರೆ. ಈ ಕುಟುಂಬಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಬೆಟ್ಟದಲ್ಲಿ ವಾಸಿಸುವ ಎರಡು ಕುಟುಂಬಗಳಲ್ಲಿ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿದ್ದಾರೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಇವರು ಹೆಚ್ಚು ಆಸಕ್ತಿ ಹೊಂದಿದ್ದಾರೆ.
ಈ ಮೂರು ಕುಟುಂಬಗಳ ಪೈಕಿ ಒಂದು ಕುಟುಂಬದಿಂದ ಬಾಲಕಿಯೋರ್ವಳು ಪಣಪಿಲ ಶಾಲೆಯಲ್ಲಿ ಕಲಿತು, ಪ್ರಸ್ತುತ ಮೂಡುಬಿದಿರೆ ಜೈನಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ, ವಿದ್ಯಾರ್ಜನೆಗಾಗಿ ಪ್ರತಿನಿತ್ಯ ಅಳಿಯೂರಿನವರೆಗೆ 10 ಕಿ.ಮೀ ನಡೆದು ನಂತರ ಅಲ್ಲಿಂದ ಪುನಃ 10 ಕಿ.ಮೀ ಬಸ್ನಲ್ಲಿ ತೆರಳಬೇಕಾಗುತ್ತದೆ. ಇನ್ನೋರ್ವ ವಿದ್ಯಾರ್ಥಿಯು ಅಳಿಯೂರಿನ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮತ್ತೋರ್ವ ವಿದ್ಯಾರ್ಥಿಯು ರೆಂಜಾಳ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಪಣಪಿಲ ಶಾಲೆಗೆ ಹೋಗುತ್ತಿರುವ ರವಿ ಎನ್ನುವ ವಿದ್ಯಾರ್ಥಿ ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಏಳನೇ ತರಗಲಿ ಪಾಸಾಗಿದ್ದಾನೆ.
ಕೊರೊನಾ ಹಿನ್ನೆಲೆ ಶಾಲೆಗೆ ಆರಂಭವಾಗದೇ ಇದ್ದ ಕಾರಣ ಶಿಕ್ಷಣ ಇಲಾಖೆಯು ವಠಾರ ತರಗತಿಗೆ ಸೂಚನೆ ನೀಡಿದ ನಿಟ್ಟಿನಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ. ಪಣಪಿಲ ಶಾಲೆಯ ಮೂವರೂ ಶಿಕ್ಷಕಿಯರು ಕೂಡಾ ಕಳೆದ ಜೂನ್ನಿಂದ ರವಿಯ ಮನೆಗೆ ವಾರಕ್ಕೊಮ್ಮೆ ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ. ದುರ್ಗಮ ಕಾಡಿನಲ್ಲಿ ಕ್ರಮಿಸಿ ಹೋಗಲು ಕಷ್ಟವಾಗುವ ಕಾರಣ ಸ್ಥಳೀಯರಾದ ಸುನೀಲ್ ಪಣಪಿಲ, ಹರೀಶ್, ದಿನೇಶ್, ವಿಶ್ವನಾಥ್, ಹಾಗೂ ಶಾಲೆಯ ಅಡುಗೆ ಸಿಬ್ಬಂದಿ ವನಿತಾ ಅವರು ಶಿಕ್ಷಕಿಯರಿಗೆ ನೆರವಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಣಪಿಲ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಜೈನ್ ಅವರು, ಕೊರೊನಾ ಸಂಕಷ್ಟದ ಸಂದರ್ಭ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಆಗಬಾರದು ಎನ್ನುವ ನಿಟ್ಟಿನಲ್ಲಿ ನಾವು ಓಂಟೆಕಜೆ ಬೆಟ್ಟಕ್ಕೆ ತೆರಳಿ ಪಾಠ ಹೇಳಿಕೊಡುತ್ತಿದ್ದೇವೆ. ಕಳೆದ ಬಾರಿ ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ 45 ಇತ್ತು, ಪ್ರಸ್ತುತ 55 ಆಗಿದೆ ಎಂದು ತಿಳಿಸಿದ್ದಾರೆ.