ಬಂಟ್ವಾಳ, ಆ. 21, (DaijiworldNews/SM):ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ಜತೆ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿದರು.





ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಆಸ್ಪತ್ರೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಪ್ರಸ್ತುತ 10 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯತ್ತಿದ್ದು ಈ ವರೆಗೆ 70 ಕೊರೊನಾ ಪೀಡಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿರುವುದಾಗಿ ತಿಳಿಸಿದರು. ಆಸ್ಪತ್ರೆಯ ಕೆಲವೊಂದು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು.
ಇನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಬಂಟ್ವಾಳ ಸರಕಾರಿ ಆಸ್ಪತ್ರೆ ಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಅತೀ ಹೆಚ್ಚಿನ ಬೇಡಿಕೆ ಇದ್ದು 2 ಯಂತ್ರಗಳು ದಿನವೊಂದಕ್ಕೆ 10 ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ತಾಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ದುಬಾರಿ ಖರ್ಚು ಮಾಡಿ ಮಂಗಳೂರಿಗೆ ತೆರಳಬೇಕಾಗುವುದು.
ಅಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಿದ್ದು ಬಂಟ್ವಾಳ ಆಸ್ಪತ್ರೆ ಗೆ 2 ಡಯಾಲಿಸಿಸ್ ಯಂತ್ರ ನೀಡುವ ಬಗ್ಗೆ ಸಚಿವರಲ್ಲಿ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಮುಜರಾಯಿ ಇಲಾಖೆಯ ಮೂಲಕ ತಾಲೂಕಿನ 'ಎ' ದರ್ಜೆ ದೇವಸ್ಥಾನದಿಂದ ಒಂದು ವಾರದ ಒಳಗಾಗಿ ಇದನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.