ಉಳ್ಳಾಲ, ಆ. 21, (DaijiworldNews/SM): ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ, ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದ ಮೊತ್ತಮೊದಲ ಪ್ಲಾಸ್ಮಾ ಥೆರಪಿ ಘಟಕಕ್ಕೆ ಅನುಮತಿ ದೊರೆತಿದೆ.

ಡಿಸಿಜಿಐ(ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ)ದಿಂದ ಬ್ಲಡ್ಬ್ಯಾಂಕ್ನ ಸೌಲಭ್ಯಗಳನ್ನು ಪರಿಶೀಲಿಸಿ ಪ್ಲಾಸ್ಮಾ ಚಿಕಿತ್ಸೆಗೆ ಪರವಾನಗಿಯನ್ನು ನೀಡಿದೆ. ಮೊದಲ ದಿನವೇ ಮೂವರು ದಾನಿಗಳಿಂದ ಪ್ಲಾಸ್ಮಾ ಸ್ವೀಕರಿಸಿ, ಅದರ ಮೂಲಕ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಧುನಿಕ ಸಾಧನಗಳು ಮತ್ತು ನುರಿತ ತಂತ್ರಜ್ಞರಿಂದ ಸುಸಜ್ಜಿತವಾಗಿರುವ ಬ್ಲಡ್ ಬ್ಯಾಂಕ್ನಿಂದಾಗಿ ಈಗ ಕೆ.ಎಸ್. ಹೆಗ್ಡೆ ಆಸ್ಪತ್ರೆಯು ಪ್ಲಾಸ್ಮಾ ಚಿಕಿತ್ಸೆಯೂ ಸೇರಿದಂತೆ ಕೊವಿಡ್-19 ರೋಗಿಗಳಿಗೆ ಸರ್ವಸೌಕರ್ಯದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಿದೆ.
ನಿಟ್ಟೆ ವಿಶ್ವವಿದ್ಯಾನಿಲಯದ ರಕ್ತನಿಧಿಯು ಕರಾವಳಿ ಕರ್ನಾಟಕದ ಮೊಟ್ಟಮೊದಲ ಬ್ಲಡ್ ಬ್ಯಾಂಕ್ ಮತ್ತು ಸಿಂಗಲ್ ಡೋನರ್ ಪ್ಲೇಟ್ಲೆಟ್ ಸೌಕರ್ಯವನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆಯಾಗಿದೆ. ಇದು ಕರಾವಳಿ ಕರ್ನಾಟಕದಲ್ಲಿ ಮೊತ್ತಮೊದಲು ಪ್ಲಾಸ್ಮಾ ಥೆರಪಿಗೆ ಅನುಮತಿಯನ್ನು ಪಡೆದು ಚಿಕಿತ್ಸೆ ನೀಡುತ್ತಿರುವ ಸಂಸ್ಥೆಯಾಗಿದೆ.
ಯಾರು ಪ್ಲಾಸ್ಮಾ ನೀಡಬಹುದು?
ತಾವು ಕೋವಿಡ್-19ರಿಂದ ಗುಣಮುಖರಾಗಿದ್ದಲ್ಲಿ ಹಾಗೂ ಈ ಕೆಳಗೆ ಕೊಡಲಾಗಿರುವ ಅಂಶಗಳು ತಮ್ಮಲ್ಲಿದ್ದಲ್ಲಿ ತಾವು ಪ್ಲಾಸ್ಮಾ ದೇಣಿಗೆ ನೀಡಬಹುದು, 18 ವರ್ಷಕ್ಕಿಂತ ಮೇಲ್ಪಟ್ಟವರು, ಎಲ್ಲ ಪುರುಷರು ಹಾಗೂ ಈವರೆಗೆ ಗರ್ಭಿಣಿಯರಾಗಿರದ ಮಹಿಳೆಯರು, 55 ಕಿ.ಗ್ರಾಂಗಿಂತ ಹೆಚ್ಚು ತೂಕವನ್ನು ಹೊಂದಿರುವವರು, ಆಸ್ಪತ್ರೆಯಿಂದ ಬಿಡುಗಡೆಗೊಂಡ 28 ದಿನಗಳ ಬಳಿಕ ಪ್ಲಾಸ್ಮಾ ದೇಣಿಗೆ ನೀಡಬಹುದು.