ಬಂಟ್ವಾಳ, ಆ 22 (DaijiworldNews/PY): ಮೊಬೈಲ್ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಯುವಕನ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಘಟನೆ ಶುಕ್ರವಾರ ಕಲ್ಲಡ್ಕದ ಪಳನೀರ ಬಳಿ ನಡೆದಿದೆ.
ಆ.21ರ ಶುಕ್ರವಾರದಂದು ಸಮಯ ಸುಮಾರು ಬೆಳಿಗ್ಗೆ 11.00 ಗಂಟೆಗೆ ಬಂಟ್ವಾಳ ಬಾಳ್ತಿಲ ಗ್ರಾಮದ ನಿವಾಸಿ ಉದಯ ಎನ್ನುವವರು ಕಲ್ಲಡ್ಕ ಪಳನೀರ ಎಂಬಲ್ಲಿ ನಡೆದುಕೊಂಡು ಬರುತ್ತಿರುವ ಸಂದರ್ಭ ಆತನ ಪರಿಚಯದ ವೀರಕಂಭ ನಿವಾಸಿ ಶ್ರೀನಿವಾಸ, ಕಲ್ಲಡ್ಕ ನಿವಾಸಿ ಪ್ರಶಾಂತ್ ಹಾಗೂ ಇನ್ನೂ ಕೆಲವರು ಒಂದು ಆಕ್ಟೀವಾ ಮತ್ತು ರಿಕ್ಷಾದಲ್ಲಿ ಬಂದು ಉದಯ ಎಂಬವರನ್ನು ತಡೆದು ನಿಲ್ಲಿಸಿ, ಅವ್ಯಾಚ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಮರದ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಉದಯ ಜೋರಾಗಿ ಬೊಬ್ಬೆ ಹೊಡೆದಾಗ ಆರೋಪಿಗಳು ಮರದ ಕೋಲನ್ನು ಅಲ್ಲಿಯೇ ಬಿಸಾಡಿ, ಜೀವ ಬೆದರಿಕೆ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮೊಬೈಲ್ ತೆಗೆದಿರುವ ಬಗ್ಗೆ ಸಂಶಯಗೊಂಡು ಆರೋಪಿಗಳು ಹಲ್ಲೆ ನಡೆಸಿರುವುದಾಗಿ ಉದಯ ದೂರು ನೀಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.