ಬೈಂದೂರು, ಆ 22 (DaijiworldNews/PY): ಉಪ್ಪುಂದ ಸಮೀಪದ ಕೊಡೇರಿಯಲ್ಲಿ ಆ.16ರಂದು ಸಂಭವಿಸಿದ ನಾಡ ದೋಣಿ ದುರಂತದಲ್ಲಿ ಮೃತ ಪಟ್ಟ ನಾಲ್ವರು ಮೀನುಗಾರರಾದ ಲಕ್ಷ್ಮಣ ಖಾರ್ವಿ, ಮಂಜುನಾಥ ಖಾರ್ವಿ, ನಾಗ ಖಾರ್ವಿ, ಶೇಖರ ಖಾರ್ವಿ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ಆರು ಲಕ್ಷ ಪರಿಹಾರವನ್ನು ಬಿಡುಗಡೆ ಮಾಡಿದ್ದು , ಪರಿಹಾರ ಮೊತ್ತದ ಆದೇಶ ಪತ್ರವನ್ನು ಸ್ವತಃ ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಆ.21ರಂದು ಮೃತರ ಮನೆಗೆ ತೆರಳಿ ಹಸ್ತಾಂತರಿಸಿದರು.




















ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೋಣಿ ದುರಂತದಲ್ಲಿ ನಾಪತ್ತೆಯಾದ ಮೀನುಗಾರರನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಬಡ ಕುಟುಂಬಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ನಾನು, ಈ ಭಾಗದ ಸಂಸದರು, ಶಾಸಕರು ಮನವಿ ಮಾಡಿದೆವು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ತಲಾ ಆರು ಲಕ್ಷಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಇವತ್ತು ಆ ಪರಿಹಾರವನ್ನು ಅವರ ಮನೆಗೆ ತೆರಳಿ ನೀಡಲಾಗಿದೆ. ಇನ್ನೂ ಕೇಂದ್ರ ಸರ್ಕಾರದಿಂದಲೂ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸಲಾಗುವುದು. ಈ ಕುಟುಂಬಗಳಿಗೆ ಮೀನುಗಾರಿಕಾ ಮನೆ, ಇತ್ಯಾದಿ ಅವಶ್ಯಕತೆಗಳ ಈಡೇರಿಕೆ ಒತ್ತು ನೀಡಲಾಗುವುದು. ಮೃತರ ಕುಟುಂಬದ ಜೊತೆ ನಾವೆಲ್ಲ ಇದ್ದೇವೆ. ಸರ್ಕಾರ ಅವರಿಗೆ ಸ್ಪಂದಿಸಲಿದೆ ಎಂದರು.
ಮೀನುಗಾರರ ಬೇಡಿಕೆಯಾಗಿರುವ ಬ್ರೇಕ್ ವಾಟರ್, ಹೂಳೆತ್ತುವುದು, ಇತ್ಯಾದಿ ಕಾಮಗಾರಿಗಳನ್ನು ಶೀಘ್ರವಾಗಿ ಮುಕ್ತಾಯ ಮಾಡಲಾಗುವುದು. ಬೈಂದೂರು ಕ್ಷೇತ್ರದಲ್ಲಿಯೇ ಹೆಚ್ಚು ಕಾಮಗಾರಿಗಳು ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ತಾ.ಪಂ.ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮೀನುಗಾರರ ಮುಖಂಡರಾದ ಮದನ್ ಕುಮಾರ್, ತಾ.ಪಂ ಸದಸ್ಯ ಕರಣ್ ಪೂಜಾರಿ ಹಾಗೂ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.