ಮಂಗಳೂರು, ಆ 22 (DaijiworldNews/PY): ಅಯ್ಯೊ ಸಿದ್ದರಾಮಯ್ಯನವರೆ, ಹಿಂದೂಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಯ್ಯೊ ಸಿದ್ದರಾಮಯ್ಯನವರೆ, ಹಿಂದೂಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ. ಎಸ್ ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದವರು ಯಾರು ಎಂಬುದು ಹಿಂದುಗಳು ಮರೆತಿಲ್ಲ. ನೀವು ಜಾತಿ- ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದು ಆಳಲು ಪ್ರಯತ್ನಿಸಿದ್ದು ಗುಟ್ಟಾಗೇನೂ ಉಳಿದಿಲ್ಲ ಎಂದಿದ್ದಾರೆ.
ಹಿಂದು ಧರ್ಮಕ್ಕೆ ಸೇರಿರುವ ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನಿಮ್ಮ ಖಾಸಾ ದೋಸ್ತ್ ನರೇಶ್ ಶೆಣೈಯನ್ನು ರಕ್ಷಿಸುತ್ತಿರುವವರು ಯಾರೆಂದು ತಿಳಿಸುವಿರಾ? ಬಾಳಿಗರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಅವರ ಸೋದರಿಯರಿಗೆ ಯಾವಾಗ ನ್ಯಾಯಕೊಡಿಸುತ್ತೀರಿ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಕೇಳಿದ್ದರು.
ಬುದ್ದಿವಂತರ ಜಿಲ್ಲೆ ಎಂಬ ದಕ್ಷಿಣಕನ್ನಡ ದ ಖ್ಯಾತಿಗೆ ಅಸೂಯೆಪಟ್ಟು ಬಿಜೆಪಿ ವರಿಷ್ಠರು, ನಳಿನ್ ಕುಮಾರ್ ಕಟೀಲ್ ಎಂಬ ನಕಲಿ ಶ್ಯಾಮನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರಬಹುದು, ಇಲ್ಲವೇ ಪಕ್ಷದಲ್ಲಿ ಈ ಮಟ್ಟದ ಬೌದ್ದಿಕ ದಾರಿದ್ರ್ಯ ಇದ್ದಿರಬಹುದು ಎಂದಿದ್ದರು.