ಮಂಗಳೂರು, ಏ 29 : ಮೂಡಬಿದಿರೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ, ಸ್ಪರ್ಧಿಸುತ್ತಿರುವ ಅಶ್ವಿನ್ ಜೊಸ್ಸಿ ಪಿರೇರಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ. ಈ ಬಗ್ಗೆ ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಝಿ ಪತ್ರಿಕಾಗೋಷ್ಟಿ ನಡೆಸಿ, ಅಶ್ವಿನ್ ಜೊಸ್ಸಿ ಪಿರೇರಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದನ್ನು ಸ್ಪಷ್ಟಪಡಿಸಿದರು. ಜೀವನ ಕೃಷ್ಣ ಶೆಟ್ಟ್ರಿ, ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಪಕ್ಷದ ನಿರ್ಧಾರಕ್ಕೆ ವಿರುದ್ದವಾಗಿ, ಅಶ್ವಿನ್ ಪಿರೇರಾ ನಾಮಪತ್ರ ಸಲ್ಲಿಸಿ ಸ್ಪರ್ಧಿಸುತ್ತಿದ್ದು, ವರಿಷ್ಠ ಮಂಡಳಿಯ ಸೂಚನೆಯಂತೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದರು.
ಅಲ್ಲದೆ ಬಂಟ್ವಾಳ ಕ್ಷೇತ್ರದಲ್ಲಿ ಪಕ್ಶದ ನಿರ್ಧಾರಕ್ಕೆ ವಿರುದ್ದವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಇಬ್ರಾಹಿಂ ಕೈಲಾರು ಅವರನ್ನು ಕೂಡಾ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಮಾತನಾಡಿದ ಜೆಡಿಎಸ್ ನ ಹಿರಿಯ ನಾಯಕ. ಕೆ ಅಮರನಾಥ ಶೆಟ್ಟಿ, ಅಶ್ವಿನ್ ಪಿರೇರಾ ಅವರು ನನಗೆ ಮೂಡುಬಿದಿರೆಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ ವಿಧಾನಪರಿಷತ್ ಗೆ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದ ಹಿನ್ನಲೆಯಲ್ಲಿ ಅವರನ್ನು ನೈಋತ್ಯ ಪದವೀಧರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸುಮಾರು 6 ತಿಂಗಳ ಹಿಂದೆಯೇ ಆಯ್ಕೆ ಮಾಡಲಾಗಿದ್ದು, ಪ್ರಚಾರವನ್ನು ಕೂಡಾ ಆರಂಭಿಸಿದರು. ಆದರೆ ಇದೀಗ ದಿಢೀರ್ ಆಗಿ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿ ನಾಮ ಪತ್ರ ಸಲ್ಲಿಸಿದ್ದರು. ನಾನು ಈ ಸಾರಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ ಹಿನ್ನಲೆಯಲ್ಲಿ 9 ವರ್ಷಗಳಿಂದ ಪಕ್ಷಕ್ಕಾಗಿ ಕಾರ್ಯಕರ್ತನಾಗಿ ದುಡಿಯುತ್ತಿರುವ ಜೀವನ್ ಶೆಟ್ಟಿ ಅವರನ್ನು ಆಯ್ಕೇ ಮಾಡಲಾಗಿತ್ತು ಎಂದು ತಿಳಿಸಿದರು.