ಮಂಗಳೂರು, ಆ 22 (DaijiworldNews/PY): ಇಂದು ಗಣೇಶನ ಹಬ್ಬವಾದ ಗಣೇಶ ಚತುರ್ಥಿಯನ್ನು ಭಕ್ತಿಯಿಂದ ಸರಳವಾಗಿ ಆಚರಿಸಲಾಗುತ್ತಿದೆ. ಕೊರೊನಾ ವೈರಸ್ನ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಸರಳವಾಗಿ ನಡೆಸಲಾಗುತ್ತಿದೆ.
















ರಾಜ್ಯ ಸರ್ಕಾರವು ನಿಯಮಗಳನ್ನು ಸಡಿಲಗೊಳಿಸಿ ಜನರಿಗೆ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, ಜನರು ಭಕ್ತಿಯಿಂದ ಹಾಗೂ ಸರಳವಾಗಿ ಹಬ್ಬವನ್ನು ಆಚರಿಸುತ್ತಿದ್ದಾರೆ.
ಅವಳಿ ಜಿಲ್ಲೆಗಳಲ್ಲಿ ಗಣೇಶೋತ್ಸವವನ್ನು ಹೆಚ್ಚಾಗಿ ಸಭಾಂಗಣ, ಭಜನಾ ಮಂದಿರ ಹಾಗೂ ಶಾಲಾ-ಕಾಲೇಜಿನ ವಠಾರದಲ್ಲಿ ಆಚರಿಸಲಾಗುತ್ತಿತ್ತು. ಅಲ್ಲದೇ, ಕುಟುಂಬದ ಸದಸ್ಯರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಸಾಮಾನ್ಯವಾಗಿ ಗಣೇಶೋತ್ಸವವು ಐದು ದಿನಗಳ ಕಾಲ ನಡೆಯುತ್ತಿತ್ತು. ಆದರೆ, ಈ ವರ್ಷ ಕೊರೊನಾ ಕಾರಣದಿಂದ ಹಬ್ಬವು ಇಂದು ಕೇವಲ ಒಂದು ದಿನಕ್ಕೆ ಮಾತ್ರವೇ ಸೀಮಿತವಾಗಿದೆ.
ಸಾರ್ವಜನಿಕ ಆಚರಣೆಗಳಲ್ಲಿ ಗಣೇಶನ ವಿಗ್ರಹದ ಎತ್ತರವನ್ನು ನಾಲ್ಕು ಅಡಿಗಳಿಗೆ ಹಾಗೂ ಮನೆಗಳಲ್ಲಿ ಸೀಮಿತಗೊಳಿಸುವಂತೆ ಈಗಾಗಲೇ ಜಿಲ್ಲಾಡಳಿತ ಸಾರ್ವಜನಿಕರಿಗೆ ಆದೇಶ ನೀಡಿದೆ. ಗಣೇಶನ ವಿಗ್ರಹ ಸ್ಥಾಪನಾ ಸ್ಥಳದಲ್ಲಿ ಕೇವಲ 20 ಜನರಿಗೆ ಮಾತ್ರವೇ ಅವಕಾಶವಿದ್ದು, ಯಾವುದೇ ಸಾಂಸ್ಕೃತಿಕ ಅಥವಾ ಯಾವುದೇ ಕಾರ್ಯಕ್ರಮವನ್ನು ನಡೆಸಲು ಅನುಮತಿ ಇಲ್ಲ.
ಸಾರ್ವಜನಿಕ ನದಿ, ಕೆರೆ, ಬಾವಿ, ಕೊಳ ಹಾಗೂ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವಂತಿಲ್ಲ. ಇನ್ನು ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲ. ಹಾಗೆಯೇ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ಗಣೇಶ ಚತುರ್ಥಿ ಹಿನ್ನೆಲೆ ಆ.21ರ ಶುಕ್ರವಾರದಂದು ಸಾಮಾಗ್ರಿ ಖರೀದಿಸಲು ಜನರು ಮಾರುಕಟ್ಟೆಗೆ ಧಾವಿಸಿದ್ದು, ಜನಜಂಗುಳಿ ಶುರುವಾಗಿತ್ತು. ಈ ವೇಳೆ ಹೂವಿನ ವ್ಯಾಪಾರವು ಚುರುಕಾಗಿತ್ತು. ಅಲ್ಲದೇ, ಕಬ್ಬಿಗೂ ಕೂಡಾ ಹೆಚ್ಚಿನ ಬೇಡಿಕೆ ಇದ್ದು, ಮಂಗಳೂರಿನಲ್ಲಿ ಸುಮಾರು 150 ರಿಂದ 200 ಟನ್ ಕಬ್ಬು ಮಾರಾಟವಾಗಿದೆ.
ಉಡುಪಿಯಲ್ಲಿ ಶುಕ್ರವಾರ ಹೂವು, ಕಬ್ಬು ಮತ್ತು ತರಕಾರಿಗಳ ವ್ಯಾಪಾರವೂ ಕೂಡಾ ಚುರುಕಾಗಿದ್ದು, ಕಬ್ಬಿನ ಪ್ರತಿ ಕೋಲಿಗೆ 50 ರಿಂದ 70 ರೂ.ಗೆ ಮಾರಾಟ ಮಾಡಲಾಗಿತ್ತು. ಗಣೇಶ ಚತುರ್ಥಿಯಂದು ಮಾಡುವ ವಿಶೇಷ ಖಾದ್ಯ ಮೂಡೆ ತಯಾರಿಕೆಗೆ ಬಳಸುವ ಎಲೆಗಳ ನೇಯ್ಗೆಯನ್ನು ಆರರಿಂದ ಏಳು ತುಂಡುಗಳಿಗೆ 100 ರೂ.ಗೆ ಮಾರಾಟ ಮಾಡಲಾಗಿತ್ತು.