ಉಡುಪಿ, ಆ. 22 (DaijiworldNews/MB) : ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಯುವತಿಯ ಕುಟುಂಬ ಸದಸ್ಯರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಮೃತ ಯುವತಿ ರಕ್ಷಾ (26) ಎಂದು ಗುರುತಿಸಲಾಗಿದೆ.
ರಕ್ಷಾ ಎರಡು ಮೂರು ದಿನ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಸ್ಟ್ 21 ರ ಬೆಳಿಗ್ಗೆ ಯುವತಿಯನ್ನು ಚಿಕಿತ್ಸೆಗಾಗಿ ಮಿಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಮನೆಗೆ ವಾಪಾಸ್ ಕರೆತರಲಾಗಿತ್ತು. ಆದರೆ, ಬೆಳಿಗ್ಗೆ 9 ಗಂಟೆ ಸುಮಾರಿಗೆ ಆಕೆಯನ್ನು ಮನೆಯವರು ಕರೆದಾಗ ಆಕೆ ಯಾವುದೇ ಸ್ಪಂದನೆ ನೀಡಿಲ್ಲ. ತಕ್ಷಣ ಆಕೆಯನ್ನು ಮಿಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅಷ್ಟರಲ್ಲಿ ಆಸ್ಪತ್ರೆಯ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಹೇಳಲಾಗಿದೆ.
ಯುವತಿ ಒಮ್ಮೆಲ್ಲೇ ಸಾವನ್ನಪ್ಪಲು ಮಿಷನ್ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ರಕ್ಷಾ ಅವರ ಕುಟುಂಬ ಸದಸ್ಯರು ದೂರಿದ್ದಾರೆ.
"ವೈದ್ಯರು ಇಂಜೆಕ್ಷನ್ ನೀಡಿದ ನಂತರ ರಕ್ಷಾ ಪ್ರಜ್ಞೆ ಕಳೆದುಕೊಂಡರು. ಆದರೆ, ನಾವು ಮತ್ತೆ ಆಸ್ಪತ್ರೆಗೆ ತೆರಳಿ ಈ ಇಂಜೆಕ್ಷನ್ ಬಗ್ಗೆ ಕೇಳಿದಾಗ, ಆಸ್ಪತ್ರೆಯ ಅಧಿಕಾರಿಗಳು ಸಂಬಂಧಪಟ್ಟ ವೈದ್ಯರು ಇಲ್ಲ ಎಂದು ಹೇಳಿದ್ದಾರೆ. ಆದರ್ಶ ಆಸ್ಪತ್ರೆಯಲ್ಲಿ ರಕ್ಷಾ ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ " ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಸ್ಥಳೀಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರೂ ಆಗಿರುವ ರಕ್ಷಾ ಅವರ ಪತಿ ಶಿವಪ್ರಸಾದ್, ಕುಟುಂಬಸ್ಥರು ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಈ ಪ್ರಕರಣದ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ರಕ್ಷಾ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು ಎಂದು ಹೇಳಲಾಗಿದೆ. ಆದರೆ ರ್ಯಾಪಿಡ್ ಆಂಟಿಜನ್ ಟೆಸ್ಟ್ನಲ್ಲಿ ನೆಗೆಟಿವ್ ಆಗಿತ್ತು ಎಂದು ಕೂಡಾ ಹೇಳಲಾಗಿದೆ. ಹಾಗೆಯೇ ಮೃತ ದೇಹದ ಅಂತಿಮ ಸಂಸ್ಕಾರದ ವಿಚಾರದಲ್ಲಿ ಗೊಂದಲಗಳು ಉಂಟಾಗಿದೆ ಎಂದು ವರದಿಯಾಗಿದೆ.
ಸ್ಥಳೀಯರು ಮತ್ತು ಮೃತರ ಕುಟುಂಬ ಸದಸ್ಯರು ಅಜ್ಜರಕಾಡು ಜಿಲ್ಲಾ ಶವಗಾರಕ್ಕೆ ಆಗಮಿಸಿ ರಕ್ಷಾ ಅವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. "ಆಸ್ಪತ್ರೆಯ ಅಧಿಕಾರಿಗಳು ರಕ್ಷಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳುವ ಮೂಲಕ ಸತ್ಯವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
ಹಾಗೆಯೇ ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಚುಚ್ಚುಮದ್ದು ನೀಡಿದ ವೈದ್ಯರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಕ್ಷಾ ಅವರು ಇಂಧಿರಾನಗರದ ನಿವಾಸಿಯಾಗಿದ್ದು ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.