ಕುಂದಾಪುರ, ಆ. 22 (DaijiworldNews/MB) : ಕೊರೊನಾ ಕಾರಣದಿಂದಾಗಿ ಈ ಬಾರಿಯ ಗಣೇಶ ಚತುರ್ಥಿ ಅತ್ಯಂತ ಸರಳವಾಗಿ ಆಚರಿಸಲ್ಪಡುತ್ತಿದೆ. ಪುರಾಣ ಪ್ರಸಿದ್ಧ ಗಣಪತಿ ಕ್ಷೇತ್ರವಾದ ಆನೆಗುಡ್ಡೆಗೆ ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸಿದ್ದರೂ ಕೂಡಾ ಕೇವಲ ದೇವರ ದರ್ಶನಕ್ಕಷ್ಟೇ ಸೀಮಿತಗೊಳಿಸಲಾಗಿತ್ತು.





















ಬೆಳಿಗ್ಗೆ 5 ಗಂಟೆಯಿಂದಲೇ ಭಕ್ತರು ಶ್ರೀ ಗಣಪತಿಯ ದರ್ಶನ ಪಡೆದರು, ಜಿಲ್ಲಾಡಳಿತದ ಮಾರ್ಗಸೂಚಿಯಂತೆ ದೇವಳ ಪ್ರವೇಶದ ಪೂರ್ವದಲ್ಲಿ ಭಕ್ತರಿಗೆ ಸ್ಯಾನಿಟೈಸ್, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿತ್ತು. ಸಾಮಾಜಿಕ ಅಂತರದೊಂದಿಗೆ ಶಿಸ್ತುಬದ್ದವಾಗಿ ಭಕ್ತರು ದೇವರ ದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಸೂರ್ಯನಾರಾಯಣ ಉಪಾಧ್ಯಾಯರು, ಜನತೆಯ ಜೀವನ ಇವತ್ತು ಕೊರೋನಾದಿಂದ ಗೊಂದಲಮಯವಾಗಿದೆ. ಅರ್ಥ ವ್ಯವಸ್ಥೆ ಹಿನ್ನೆಡೆ ಕಂಡಿದೆ. ದೇಶ ಶೀಘ್ರವಾಗಿ ಕೊರೊನಾದಿಂದ ಮುಕ್ತವಾಗಲಿ, ಮರಳಿ ಯಥಾಸ್ಥಿತಿ ಬರಲಿ, ಭಕ್ತರಿಗೆ ಶ್ರೀದೇವರ ಸೇವೆ ಮಾಡುವ ಅವಕಾಶ ಒದಗಿ ಬರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ. ಇವತ್ತು ಶ್ರೀ ಕ್ಷೇತ್ರದಲ್ಲಿ ಭಕ್ತರು ದೇವರ ದರ್ಶನವನ್ನಷ್ಟೇ ಮಾಡುತ್ತಿದ್ದಾರೆ. 10 ಸಾವಿರದಷ್ಟೂ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಜಿಲ್ಲಾಡಳಿತದ ಮಾರ್ಗಸೂಚಿ ಅನ್ವಯ ನಿಯಮಗಳನ್ನು ಪಾಲಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಾಜಿ ಶಾಸಕರಾದ ಜೀವರಾಜ್, ಕೆ.ಗೋಪಾಲ ಪೂಜಾರಿ, ಮೀನುಗಾರ ಮುಖಂಡರಾದ ಯಶಪಾಲ್ ಸುವರ್ಣ ಮೊದಲಾದವರು ಭೇಟಿ ನೀಡಿ ದೇವರದ ದರ್ಶನ ಪಡೆದರು.