ಮಂಗಳೂರು, ಆ. 22 (DaijiworldNews/MB) : ಕೊರೊನಾ ಸೋಂಕಿನ ವಿರುದ್ದ ಹೋರಾಡುತ್ತಿದ್ದ ಸೋಂಕು ತಗುಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಸಿಇಟಿಯಲ್ಲಿ ಉನ್ನತ ರ್ಯಾಂಕ್ ಪಡೆಯುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರದ ಚೈತನ್ಯ ಪಿಯು ಕಾಲೇಜಿನ ವಿದ್ಯಾರ್ಥಿ ಚಿರಾಗ್ ಎಸ್ ರಾವ್ ಸಿಇಟಿಯಲ್ಲಿ ಬಿಎಸ್ಸಿ ಕೃಷಿ ವಿಭಾಗದಲ್ಲಿ 28 ನೇ ರ್ಯಾಂಕ್ ಪಡೆದಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ಕೊರೊನಾ ವಿರುದ್ದದ ಹೋರಾಟದ ನಡುವೆಯೂ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ 28 ನೇ ರ್ಯಾಂಕ್ ಪಡೆದಿದ್ದಾರೆ.
ಆಗಸ್ಟ್ 21 ರ ಶುಕ್ರವಾರ ಸಿಇಟಿಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಬಿಎಸ್ಸಿ ಕೃಷಿ ವಿಷಯದಲ್ಲಿ 28 ನೇ ರ್ಯಾಂಕ್ ಪಡೆದಿರುವ ಚಿರಾಗ್ ಅವರು, ಪಶುವೈದ್ಯಕೀಯ ವಿಷಯದಲ್ಲಿ 29 ನೇ ರ್ಯಾಂಕ್, ಬಿ ಫಾರ್ಮಾ / ಡಿ ಫಾರ್ಮಾದಲ್ಲಿ 46 ನೇ ರ್ಯಾಂಕ್, ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ 32 ನೇ ರ್ಯಾಂಕ್ ಹಾಗೂ ಎಂಜಿನಿಯರಿಂಗ್ನಲ್ಲಿ 214 ನೇ ರ್ಯಾಂಕ್ ಪಡೆದಿದ್ದಾರೆ.
ಸಿಇಟಿ ಪರೀಕ್ಷೆಯನ್ನು ಬರೆಯುವ ಒಂದು ವಾರಕ್ಕೂ ಮುನ್ನ ಚಿರಾಗ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಆದರೆ ಅವರಲ್ಲಿ ಯಾವುದೇ ಲಕ್ಷಣಗಳು ಇರಲಿಲ್ಲ. ಸೋಂಕಿಗೆ ತುತ್ತಾಗಿದ್ದ ಕಾರಣದಿಂದಾಗಿ ಡಿಸಿ ಕಚೇರಿ ಒದಗಿಸಿದ ವಿಶೇಷ ವಾಹನದಲ್ಲಿ ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ಚಿರಾಗ್ ತನ್ನ ಪರೀಕ್ಷೆಯನ್ನು ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳಿಗಾಗಿ ಗುರುತಿಸಲ್ಪಟ್ಟಿದ್ದ ಎನ್ಐಟಿಕೆ ಸುರತ್ಕಲ್ನಲ್ಲಿರುವ ವಿಶೇಷ ಪರೀಕ್ಷಾ ಕೇಂದ್ರದಲ್ಲಿ ಬರೆದಿದ್ದಾರೆ. ಚಿರಾಗ್ ಪ್ರಕಾರ, ಸಿಇಟಿಯನ್ನು ಬರೆದ ಕೊರೊನಾ ಸೋಂಕಿತ ಏಕೈಕ ವಿದ್ಯಾರ್ಥಿ ಅವರಾಗಿದ್ದಾರೆ.
ಚಿರಾಗ್ ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಬಯಸಿದ್ದು ಸೆಪ್ಟೆಂಬರ್ 13 ರಂದು ನೀಟ್ ಪರೀಕ್ಷೆ ಬರೆದ ನಂತರ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕಲಿಕೆಯಲ್ಲಿ ಮುನ್ನಡೆಯಬೇಕು ಎಂದು ನಿರ್ಧರಿಸಿರುವುದಾಗಿ ಹೇಳಿದ್ದಾರೆ.