ಮಂಗಳೂರು, ಏ 29 : ಶಕ್ತಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಶ್ರಯ ಯೋಜನೆ ಕುರಿತು ಸಿಪಿಐಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಮತ್ತು ಬಿಜೆಪಿ ಮುಖಂಡ ಪ್ರೇಮನಾಂದ ಶೆಟ್ಟಿ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದು, ಅವರು ಈ ಹಿಂದೆ ಮಾಡಿದ ಎಲ್ಲಾ ಆರೋಪಗಳನ್ನು ಶಾಸಕ ಜೆ.ಆರ್ ಲೋಬೋ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಏ, 29 ರ ಭಾನುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಲೋಬೋ, ಸಿಪಿಐಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಹಾಗು ಬಿಜೆಪಿ ಮುಖಂಡ ಪ್ರೇಮಾನಂದ ಶೆಟ್ಟಿ ಈ ಯೋಜನೆ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜನರಿಗೆ ಮೋಸ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ವಿಧಾನ ಪರಿಷತ್ ಸದಸ್ಯ, ಗಣೇಶ್ ಕಾರ್ಣಿಕ್ ಮತ್ತು ಮನಪಾ ಸದಸ್ಯರಾಗಿರುವ ಪ್ರೇಮನಾಂದ ಶೆಟ್ಟಿ ಸೇರಿದಂತೆ ಇತರ ಪಕ್ಷದ ಸದಸ್ಯರು ಆಶ್ರಯ ಯೋಜನೆ ಕಮಿಟಿಯಲ್ಲಿದ್ದಾರೆ. ಪ್ರತಿಪಕ್ಷ ಮುಖಂಡ ಪ್ರೇಮಾನಂದ ಶೆಟ್ಟಿ ಅವರಿಗೆ ಈ ಯೋಜನೆಯ ಬಗ್ಗೆ ಸಂಪೂರ್ಣ ಅರಿವಿದ್ದು, ಯೋಜನೆ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಶಾಸಕನಾದ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಭಾರಿ ಶ್ರಮ ವಹಿಸಿದ್ದೇನೆ. ಕಳೆದ 3 ವರ್ಷಗಳ ಪ್ರಯತ್ನದ ಫಲವಾಗಿ ಈ ಯೋಜನೆಗೆ ಸರಕಾರದಿಂದ ಮಂಜೂರಾತಿ ದೊರೆತು ಟೆಂಡರ್ ಕೂಡ ಆಗಿದೆ. ಆದರೆ ಸಿಪಿಐಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಹಾಗು ಬಿಜೆಪಿ ಮುಖಂಡ ಪ್ರೇಮಾನಂದ ಶೆಟ್ಟಿ ಈ ಯೋಜನೆ ಕುರಿತು ಜನರನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.