ಕಾರ್ಕಳ, ಏ 30: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ಕುಮಾರ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಎರಡು ಕೇಸು ದಾಖಲಾಗಿದೆ.
ಏಪ್ರಿಲ್ 23ರಂದು ಬಿಜೆಪಿ ವತಿಯಿಂದ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯನ್ನು ಕಾರ್ಕಳ ತಾಲೂಕು ಕಚೇರಿಯ ಬಳಿಯ ಮೈದಾನದಲ್ಲಿ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ರಾಜನಾಥ ಸಿಂಗ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ ತಾಲೂಕು ಕಛೇರಿ ಬಳಿಯ ಶ್ರೀರಾಮ ಭಜನಾ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಭೋಜನಾ ವ್ಯವಸ್ಥೆ ಮಾಡುವ ಮೂಲಕ ಕಾರ್ಯಕ್ರಮದ ಆಯೋಜಕ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ಕುಮಾರ್ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನುವ ಆರೋಪವಿದೆ. ಧಾರ್ಮಿಕ ಸಂಸ್ಥೆಯಾದ ಶ್ರೀರಾಮ ಮಂದಿರದಲ್ಲಿ ರಾಜಕೀಯ ಚಟುವಟಿಕೆ ಮಾಡಲು ಹಾಗೂ ಭೋಜನ ವ್ಯವಸ್ಥೆ ಮಾಡಿದ್ದು, ಮಂದಿರ ಆಡಳಿತ ಮೊಕ್ತೇಸರರು ಅನುವು ಮಾಡಿಕೊಟ್ಟಿರುವುದಾಗಿ 122 ಕಾರ್ಕಳ ವಿಧಾನ ಸಭಾ ಕ್ಷೇತ್ರ ಕ್ಷಿಪ್ರ ಸಂಚಾರಿ ದಳ ಅಧಿಕಾರಿ ಕೆ.ದೇವದಾಸ ಹೆಗ್ಡೆ ನೀಡಿರುವ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿರುತ್ತದೆ.
ಇನ್ನೊಂದು ಪ್ರಕರಣಕ್ಕೆ ಸಂಬಂದಿಸಿದಂತೆ ಅದೇ ದಿನ ಕಾರ್ಕಳದ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಭೋಜನ ವ್ಯವಸ್ಥೆ ಮಾಡಿರುವ ಮೂಲಕ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ಕುಮಾರ್ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುತ್ತಾರೆ.
ಅಲ್ಲದೇ ಧಾರ್ಮಿಕ ಸಂಸ್ಥೆಯಾದ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ರಾಜಕೀಯ ಚಟುವಟಿಕೆ ಮಾಡಲು ಭೊಜನಾ ವ್ಯವಸ್ಥೆ ಮಾಡಿದ್ದು, ದೇವಳದ ಆಡಳಿತ ಮುಖ್ಯಸ್ಥರು ಅದಕ್ಕೆ ಅನುವು ಮಾಡಿಕೊಟ್ಟಿರುವುದಾಗಿ 122 ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕ್ಷಿಪ್ರ ಸಂಚಾರಿ ದಳದ ಅಧಿಕಾರಿ ನವೀನ್ ಕುಮಾರ್ ನೀಡಿರುವ ದೂರಿನನ್ವಯ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.