ಉಡುಪಿ, ಆ. 22 (DaijiworldNews/MB) : ಅಲ್ಪಾವಧಿಯ ಅನಾರೋಗ್ಯದಿಂದ ಸಾವನ್ನಪ್ಪಿದ ಯುವತಿಯ ಕೊರೊನಾ ವರದಿಯಲ್ಲಿ ತಪ್ಪಾಗಿದೆ ಎಂಬ ಕುಟುಂಬಸ್ಥರ ಆರೋಪವನ್ನು ಅಲ್ಲಗಳೆದಿರುವ ಜಿಲ್ಲಾಸ್ಪತ್ರೆಯು ಜಿಲ್ಲಾ ಆಸ್ಪತ್ರೆ ಮತ್ತು ಪ್ರಯೋಗಾಲಯದ ಮೇಲೆ ಹೊರಿಸಲಾಗಿರುವ ಸುಳ್ಳು ಪರೀಕ್ಷಾ ವರದಿಯ ಆರೋಪವನ್ನು ನಾವು ನಿರಾಕರಿಸುತ್ತೇವೆ ಎಂದು ಹೇಳಿದ್ದಾರೆ.

ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಾ (26) ಎಂಬ ಯುವತಿ ಸಾವನ್ನಪ್ಪಿದ್ದು, ಇದಕ್ಕೆ ಮಿಷನ್ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಯುವತಿಯ ಕುಟುಂಬ ಸದಸ್ಯರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗೆಯೇ "ಆಸ್ಪತ್ರೆಯ ಅಧಿಕಾರಿಗಳು ರಕ್ಷಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳುವ ಮೂಲಕ ಸತ್ಯವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಸ್ಪತ್ರೆಯು, ''2020 ರ ಆಗಸ್ಟ್ 21 ರಂದು ಪರೀಕ್ಷಾ ಮನವಿಯನ್ನು ಸ್ವೀಕರಿಸಲಾಗಿದೆ. ಪರೀಕ್ಷಾ ಮಾದರಿಯನ್ನು ಪರಿಶೀಲಿಸಲಾಗಿದೆ ಮತ್ತು ಲ್ಯಾಬ್ ಪ್ರೋಟೋಕಾಲ್ ಪ್ರಕಾರ, ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ನಡೆಸಲಾಗಿದೆ. ವರದಿಯಲ್ಲಿ ಲ್ಯಾಬ್ ಸ್ಯಾಂಪಲ್ನಲ್ಲಿ ನಮೂದಿಸಲಾದ ''ಪರೀಕ್ಷಾ ದಿನಾಂಕ''ದೊಂದಿಗೆ ಫಲಿತಾಂಶವನ್ನು ನೀಡಲಾಗಿದೆ. ರೋಗಿಯ ವಿವರಗಳೊಂದಿಗೆ ''ಮಾದರಿ ಸಂಗ್ರಹದ ದಿನಾಂಕ'' ವನ್ನು ಆರ್ಟಿ-ಪಿಸಿಆರ್ ಅಪ್ಲಿಕೇಶನ್ನಿಂದ ಪಡೆಯಲಾಗಿದೆ. ಆಗಸ್ಟ್ 21, 2020 ರಂದು ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಮಾದರಿಯನ್ನು ಸಂಗ್ರಹಿಸಲಾಗಿದೆ. ಆರ್ಟಿ-ಪಿಸಿಆರ್ ಅಪ್ಲಿಕೇಶನ್ನಲ್ಲಿ ವಿವರಗಳನ್ನು ಸರಿಯಾಗಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಐಸಿಎಂಆರ್ ಪೋರ್ಟಲ್ನಲ್ಲಿ ಸಂಗ್ರಹದ ದಿನಾಂಕವನ್ನು 20 ಆಗಸ್ಟ್ 2020 ಎಂದು ತಪ್ಪಾಗಿ ನಮೂದಿಸಲಾಗಿದೆ. ಹಾಗಾಗಿ ವರದಿಯಲ್ಲಿ ತಪ್ಪಾಗಿ ನಮೂದನೆಯಾಗಿದೆ ಎಂದು ನಾವು ನಾವು ಸ್ಪಷ್ಟಪಡಿಸುತ್ತೇವೆ. ಐಸಿಎಂಆರ್ ಪೋರ್ಟಲ್ ತಾಂತ್ರಿಕ ದೋಷ ಉಂಟಾಗಿದ್ದು ಇದರಲ್ಲಿ ಜಿಲ್ಲಾ ಆಸ್ಪತ್ರೆ ಪ್ರಯೋಗಾಲಯದ ಯಾವುದೇ ಕೈವಾಡವಿಲ್ಲ. ಜಿಲ್ಲಾ ಆಸ್ಪತ್ರೆ ಮತ್ತು ಪ್ರಯೋಗಾಲಯದ ಮೇಲೆ ಸುಳ್ಳು ಪರೀಕ್ಷಾ ವರದಿಯ ಬಗ್ಗೆ ಇರುವ ಆರೋಪಗಳನ್ನು ನಾವು ನಿರಾಕರಿಸುತ್ತೇವೆ'' ಎಂದು ತಿಳಿಸಿದ್ದಾರೆ.