ಬೈಂದೂರು, ಏ 30 : ಸ್ವಾತಂತ್ರ್ಯ ನಂತರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಶೇ 10 ಮಾತ್ರ. ಹಿಂದಿನ ನಾಲ್ಕು ಅವಧಿಗೆ ಶಾಸಕರಾಗಿದ್ದವರು ಕೂಡ ಈ ನಿಟ್ಟಿನಲ್ಲಿ ಸರಿಯಾದ ಪ್ರಯತ್ನ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಬೈಂದೂರನ್ನು ಅಭಿವೃದ್ಧಿಯ ದೃಷ್ಟಿಯಿಂದ ಮಾದರಿಯಾಗಿಸುವ ಕನಸಿನೊಂದಿಗೆ ಚುನಾವಣಾ ರಾಜಕಾರಣ ಪ್ರವೇಶಿಸಿದೆ. ಈ ಬಾರಿ ಇಲ್ಲಿನ ಮತದಾರರು ನನಗೆ ಆಶೀರ್ವಾದ ಮಾಡುವುದು ಖಚಿತ ಎಂದು ಬೈಂದೂರು ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಬೈಂದೂರಿನ ಪಕ್ಷದ ಕಚೇರಿಯಲ್ಲಿ ಏ.29 ರ ಭಾನುವಾರ ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಐದು ನದಿಗಳು ಹರಿಯುತ್ತಿವೆ. ಆದರೆ ಎಲ್ಲ 64 ಗ್ರಾಮಗಳಲ್ಲೂ ಬೇಸಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗುತ್ತಿದೆ. ವಾರಾಹಿ ನದಿಯ ದಕ್ಷಿಣ ದಂಡೆಗೆ ನೀರು ದೊರಕಿದೆ. ಇಲ್ಲಿ ಆ ದಿಕ್ಕಿನಲ್ಲಿ ಯಾವ ಪ್ರಯತ್ನವೂ ನಡೆದಿಲ್ಲ. ಶಿಕ್ಷಣದಲ್ಲಿ ಕ್ಷೇತ್ರ ತೀರ ಹಿಂದುಳಿದಿದೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಹೊಸ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು ಆಗಿಲ್ಲ. ದೊಡ್ಡ ಸರಕಾರಿ ಆಸ್ಪತ್ರೆಯಿಲ್ಲ. ಇರುವ ಆಸ್ಪತ್ರೆಗೆಳಲ್ಲಿ ವೈದ್ಯರು, ಸೌಲಭ್ಯಗಳಿಲ್ಲ. ಜನರು ಕುಂದಾಪುರದ ಖಾಸಗಿ ಆಸ್ಪತ್ರೆ ಆಶ್ರಯಿಸುತ್ತಿದ್ದಾರೆ. ಇಲ್ಲಿಗೆ ವೈದ್ಯಕೀಯ, ತಾಂತ್ರಿಕ ಕಾಲೇಜು, ವಿಮಾನ ನಿಲ್ದಾಣ ತರುವ ಅವಕಾಶವಿತ್ತು. ಸುಂದರ ಪ್ರದೇಶ, ನಿಸರ್ಗ ಸಂಪತ್ತು ಇದ್ದರೂ ಅದನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಿಕೊಂಡಿಲ್ಲ. ಇದು ಹಾಲಿ ಶಾಸಕರ ವೈಫಲ್ಯ ಎಂದು ಅವರು ದೂರಿದರು.
ಕಳೆದ ಬಾರಿ ಸಂಘಟನೆ, ಪ್ರಚಾರಕ್ಕೆ ಸಮಯ ಸಿಗದ ಕಾರಣ ಸೋಲಬೇಕಾಯಿತು. ಅದರಿಂದ ಪಾಠ ಕಲಿತು ಪಕ್ಷವನ್ನು ಇಲ್ಲಿ ಬಲಿಷ್ಠವಾಗಿ ಕಟ್ಟಲಾಗಿದೆ. ಕಾರ್ಯಕರ್ತರ ದೊಡ್ಡ ಪಡೆ ಇದೆ. ಪಕ್ಷದಲ್ಲಿ ಒಡಕಿಲ್ಲ. ಮತದಾರರು, ಮುಖ್ಯವಾಗಿ ಯುವಜನರು ಮೋದಿ ಅವರಿಂದ, ಅವರ ಆಡಳಿತ ಮತ್ತು ಅಭಿವೃದ್ಧಿಯ ಸಾಧನೆಗಳಿಂದ ಆಕರ್ಷಿತರಾಗಿದ್ದಾರೆ. ತನಗೂ ಎಲ್ಲ ವರ್ಗದ ಜನರ ಜತೆ ಉತ್ತಮ ಬಾಂಧವ್ಯ ಇದೆ. ಕೊಲ್ಲೂರು ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ, ಕುಂದಾಪುರದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಆಡಳಿತದ ಮುಖ್ಯಸ್ಥನಾಗಿ ನಡೆಸಿದ ಸಾಧನೆಗಳ ಅರಿವು ಎಲ್ಲರಿಗಿದೆ. ಆದುದರಿಂದ ಈ ಬಾರಿಯ ಚುನಾವಣೆಯಲ್ಲಿ ಬೃಹತ್ ಅಂತರದಿಂದ ಜಯ ಸಾಧಿಸಲಿದ್ದೇನೆ ಎಂದರು. ಪಕ್ಷದ ವಲಯಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ರಾಜ್ಯದಲ್ಲಿ ಈ ಬಾರಿಯದು ಧರ್ಮ ಅಧರ್ಮಗಳ ನಡುವಿನ ಚುನಾವಣೆ. ಧರ್ಮ ವಿರೋಧಿ ಹಾಗೂ ಧರ್ಮಗಳನ್ನು ವಿಭಜಿಸಿ ಆಳುತ್ತಿರುವ ಸಿದ್ಧರಾಮಯ್ಯ ಸರಕಾರವನ್ನು ಜನರು ತಿರಸ್ಕರಿಸುವರು ಎಂದರು.
ಕ್ಷೇತ್ರ ಉಸ್ತುವಾರಿ ಪ್ರವೀಣಕುಮಾರ ಗುರ್ಮೆ, ಪ್ರಮುಖರಾದ ದೀಪಕ್ಕುಮಾರ ಶೆಟ್ಟಿ, ನವೀನಚಂದ್ರ ಉಪ್ಪುಂದ ಇದ್ದರು.