ಮಂಗಳೂರು, ಆ. 23 (DaijiworldNews/SB) : ಮಂಗಳೂರಿನ ಬಳ್ಳಾಲ್ ಭಾಗ್ ಮೈದಾನದ ಬಲಿ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದ ಹಾವೊಂದಕ್ಕೆ ಚಿಕಿತ್ಸೆ ನೀಡಿ ಪ್ರಾಣಿ ಪ್ರಿಯೆ ರಜನಿ ಶೆಟ್ಟಿ ಮತ್ತೊಮ್ಮೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯಾವುದೋ ವಾಹನ ಬಡಿದು ಗಾಯಗೊಂಡು ತೆವಳಲು ಹರಸಾಹಸ ಪಡುತ್ತಿದ್ದ ಹಾವನ್ನು ಕಂಡ ಕೆಲ ಸ್ಥಳೀಯರು ಮರುಕಪಟ್ಟು ಹಾವಿನ ಚಿಕಿತ್ಸೆಗಾಗಿ ರಜನಿ ಶೆಟ್ಟಿಯವರನ್ನು ಸಂಪರ್ಕಿಸಿದ್ದರು. ತಕ್ಷಣ ಉರಗ ತಜ್ನ ಅತುಲ್ ಪೈ ಬಳ್ಳಾಲ್ ಇವರೊಡಗೂಡಿ ಸ್ಥಳಕ್ಕೆ ಧಾವಿಸಿದ ರಜನಿ ಹಾವಿಗೆ ಪ್ರಥಮ ಚಿಕಿತ್ಸೆ ನೀಡಿದರು. ಹಾವಿನ ಗಾಯ ತೀವ್ರ ಸ್ವರೂಪದ್ದು ಅಲ್ಲವೆಂದು ಅರಿತ ರಜನಿ ಶೆಟ್ಟಿ ಹಾಗೂ ಅತುಲ್ ಅದನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಗಾಯಗೊಂಡ ಉರಗಗಳ ಹತ್ತಿರ ಸುಳಿಯುವುದು ಅಪಾಯಕಾರಿ ಎಂಬ ಭಾವನೆಯಿರುವ ಸಮಾಜದಲ್ಲಿ ಪ್ರಾಣಿಗಳ ಮೇಲಿನ ಮಮತೆಯಿಂದ ಹಾಗೂ ಹಾವುಗಳ ಬಗ್ಗೆ ಇರುವ ವೈಜ್ನಾನಿಕ ಅರಿವಿನಿಂದ ರಜನಿ ಶೆಟ್ಟಿ ಮಾಡಿದ ಕಾರ್ಯಕ್ಕೆ ಸ್ಥಳೀಯರು ವಿಶೇಷ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ ಇದರ ಕೇಂದ್ರೀಯ ಸಮಿತಿ ಸದಸ್ಯೆಯಾಗಿರುವ ರಜನಿ ಈ ಹಿಂದೆಯೂ ಉರಗಗಳನ್ನು ರಕ್ಷಿಸುವ ಮಹಿಳೆ ಎಂದು ಸುದ್ದಿಯಾಗಿದ್ದರು.