ಕುಂದಾಪುರ, ಆ. 23 (DaijiworldNews/MB) : ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಬೇರೆ ವ್ಯಕ್ತಿಯ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಿದ ವಿಲಕ್ಷಣ ಘಟನೆ ಕೋಟೇಶ್ವರದಲ್ಲಿ ನಡೆದಿದೆ. ಈ ವಿಷಯವು ಅಂತಿಮ ಸಂಸ್ಕಾರ ನಡೆಯಲಿದ್ದ ಕೆಲವೇ ನಿಮಿಷಗಳ ಮೊದಲು ಬೆಳಕಿಗೆ ಬಂದಿದೆ.

















ಕೋಟೇಶ್ವರ ನಿವಾಸಿ ಗಂಗಾಧರ್ ಆಚಾರ್ಯ (65) ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಅವರ ದೇಹವನ್ನು ಕೊರೊನಾ ನಿಯಮಾವಳಿ ಪ್ರಕಾರವಾಗಿ ಸಂಪೂರ್ಣವಾಗಿ ಪ್ಯಾಕ್ ಮಾಡಿ ಆಂಬುಲೆನ್ಸ್ ಮೂಲಕ ಹಳೇಕೋಟೆ ಸ್ಮಶಾನಕ್ಕೆ ತರಲಾಗಿತ್ತು. ದೇಹವನ್ನು ಸಂಪೂರ್ಣವಾಗಿ ಪ್ಯಾಕ್ ಮಾಡಲಾಗಿದ್ದ ಕಾರಣ ಕುಟುಂಬದವರಿಗೆ ಮೃತದೇಹದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಅಂತಿಮ ಸಂಸ್ಕಾರ ನಡೆಸುವ ಸಂದರ್ಭದಲ್ಲಿ ಪ್ಯಾಕ್ನ್ನು ತೆರೆದಾಗ ಮೃತದೇಹ ಗಂಗಾಧರ ಅವರದಲ್ಲ ಎಂದು ತಿಳಿದು ಬಂದಿದ್ದು ಕುಟುಂಬಕ್ಕೆ ಆಘಾತವಾಗಿದೆ. 65 ವರ್ಷದ ಗಂಗಾಧರ್ ಆಚಾರ್ಯರ ಶವದ ಬದಲಾಗಿ ಓರ್ವ ಯುವಕನ ಮೃತದೇಹವು ಕುಟುಂಬಕ್ಕೆ ಅಂತಿಮ ಸಂಸ್ಕಾರ ನಡೆಸಲು ನೀಡಲಾಗಿತ್ತು.
ತಪ್ಪಾಗಿ ಬೇರೆಯೇ ಮೃತದೇಹ ನೀಡಿದ ಕಾರಣಕ್ಕಾಗಿ ಕುಟುಂಬಸ್ಥರು ಹಾಗೂ ಸ್ಥಳೀಯರು ಆಂಬುಲೆನ್ಸ್ ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದು ಸ್ಥಳದಲ್ಲೇ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೋಲಿಸರು ಆಗಮಿಸಿ ಸ್ಥಳೀಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಮಧ್ಯಾಹ್ನ ಆಗುವಷ್ಟರಲ್ಲಿ ಗಂಗಾಧರ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ತರಲಾಗಿದ್ದು ಮೃತ ಯುವಕನ ಮೃತದೇಹವನ್ನು ವಾಪಾಸ್ ತೆಗೆದುಕೊಂಡು ಹೋಗಲಾಗಿದೆ.