ಕಾಸರಗೋಡು, ಆ. 23 (DaijiworldNews/MB) : ದೇಶದ ಎಲ್ಲಾ ಗಡಿಗಳನ್ನು ತೆರೆಯುವಂತೆ ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದರೂ ತಲಪಾಡಿ ಗಡಿ ತೆರೆಯದ ಸರಕಾರದ ಜನವಿರೋಧಿ ನಿಲುವನ್ನು ಖಂಡಿಸಿ ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಯಿತು.


ಕೊರೊನಾ ಮಾನದಂಡಗಳನ್ನು ಪಾಲಿಸಿಕೊಂಡು ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಇಲ್ಯಾಸ್ ತೂಮಿನಾಡು, ಮೂಸಾ, ರೌಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಹೆದ್ದಾರಿ ತಡೆ ಮಾಡಿ ಗಡಿ ತೆರೆಯುವಂತೆ ಘೋಷಣೆಗಳನ್ನು ಕೂಗಿದರು.
ಮಂಜೇಶ್ವರ ಠಾಣಾಧಿಕಾರಿ ರಾಘವನ್ ನೇತೃತ್ವದ ಪೋಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಬಂಧಿಸಿದರು. ಗಡಿಯನ್ನು ತೆರೆಯದಿದ್ದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರ ನೇತೃತ್ವದಲ್ಲಿ ತಲಪಾಡಿಯಲ್ಲಿ ಮುತ್ತಿಗೆ ಹಾಕಲಾಗುವುದೆಂದು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಎಚ್ಚರಿಸಿದರು.