ಉಡುಪಿ, ಆ. 23 (DaijiworldNews/MB) : ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದು ಸಾವನ್ನಪ್ಪಿದ 26 ವರ್ಷದ ಮಹಿಳೆಯ ಸಾವಿನ ಕುರಿತಾಗಿ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಆದೇಶಿಸಿದ್ದಾರೆ.

ಈ ಬಗ್ಗೆ ತನಿಖೆಗೆ ಡಿಎಚ್ಒ ನೇತೃತ್ವದ ಸಮಿತಿ ರಚಿಸಲಾಗಿದ್ದು ನಾಲ್ಕು ದಿನಗಳಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ 26 ವರ್ಷದ ರಕ್ಷಾ ಎಂಬ ಮಹಿಳೆ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಹಿಳೆಯ ಕುಟುಂಬ ಸದಸ್ಯರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
"ವೈದ್ಯರು ಇಂಜೆಕ್ಷನ್ ನೀಡಿದ ನಂತರ ರಕ್ಷಾ ಪ್ರಜ್ಞೆ ಕಳೆದುಕೊಂಡರು. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ. ಆಸ್ಪತ್ರೆಯ ಅಧಿಕಾರಿಗಳು ರಕ್ಷಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳುವ ಮೂಲಕ ಸತ್ಯವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರೂ ಆಗಿರುವ ರಕ್ಷಾ ಅವರ ಪತಿ ಶಿವಪ್ರಸಾದ್, ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಅವರು ಆರೋಪಿಸಿ ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಇದೀಗ ಈ ಪ್ರಕರಣದ ತನಿಖೆಯನ್ನು ನಡೆಸಿ ನಾಲ್ಕು ದಿನಗಳಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಆದೇಶಿಸಿದ್ದಾರೆ.