ಮುಂಬೈ, ಸೆ22: ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ. ಕಾರಣ ಇಷ್ಟೇ.. ನಾನೆಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳೊತ್ತೇನೋ ಅನ್ನೋ ಭಯದಿಂದ. ಹೌದು, ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಜೀವ ಬೆದರಿಕೆಗಳಿದೆ. ಭಾರತ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದಾವೂದ್ ಇಬ್ರಾಹಿ ನಾಲ್ಕು ಬಾರಿ ಮನೆ ಬದಲಿಸಿದ್ಧಾನೆ. ಹೀಗಂತ ಹೇಳಿರೋದು, ದಾವೂದ್ ಇಬ್ರಾಹಿ ಸಹೋದರ ಇಕ್ಬಾಲ್ ಕಸ್ಕರ್.
ಕೆಲ ದಿನಗಳ ಹಿಂದೆ ಸುಲಿಗೆ ಪ್ರಕರಣವೊಂದರಲ್ಲಿ ಪೊಲೀಸರ ಅತಿಥಿಯಾಗಿರುವ ಇಕ್ಬಾಲ್ ಕಸ್ಕರ್ ನನ್ನು ಪೊಲೀಸರು 8 ದಿನಗಳ ಕಾಲ ವಶದಲ್ಲಿ ಇಟ್ಟುಕೊಂಡಿದ್ದಾರೆ. ಸುಲಿಗೆ ಪ್ರಕರಣ ಮತ್ತು ದಾವೂದ್ ನಡುವೆ ಸಂಬಂಧವಿದೆಯೇ ಎಂಬುವುದನ್ನು ತಿಳಿದುಕೊಳ್ಳಲು ಇಕ್ಬಾಲ್ ಕಸ್ಕರ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭ ಕಸ್ಕರ್, ದಾವೂದ್ ಪಾಕಿಸ್ತಾನದಲ್ಲಿಯೇ ಇದ್ದಾನೆ. ಪಶ್ಚಿಮ ಹಾಗೂ ಪೂರ್ವ ಆಫ್ರಿಕಾ ದೇಶದಲ್ಲಿ ಹೂಡಿಕೆ ಮಾಡಿದ್ದಾನೆ. ಆತನಿಗೆ ಪಾಕಿಸ್ತಾನದಲ್ಲಿ ಬಿಗಿ ಭದ್ರತೆ ಇದ್ದು, ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ಮನೆ ಬದಲಾಯಿಸಿದ್ದಾನೆ. ಕುಟುಂಬದ ಯಾರೊಬ್ಬ ಸದಸ್ಯರೊಂದಿಗೂ ಅವನು ಮಾತನಾಡುವುದಿಲ್ಲ. ಲ್ಯಾಟಿನ್ ಅಮೇರಿಕಾದ ಮಾದಕ ವಸ್ತು ದಂಧೆಕೋರರ ಜತೆ ನಂಟು ಹೊಂದಿದ್ದಾನೆ ಎಂದು ಪೊಲೀಸರಲ್ಲಿ ಇಕ್ಬಾಲ್ ಕಸ್ಕರ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.