ಮಂಗಳೂರು, ಆ. 24 (DaijiworldNews/MB) : ವ್ಯಾಪಾರಸ್ಥರ ವಿರೋಧದ ನಡುವೆಯೂ ನಗರದ ಕಾವೂರಿನಲ್ಲಿ ಯಾವುದೇ ಅನುಮತಿಯಿಲ್ಲದೆ ಅಕ್ರಮವಾಗಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಸುಮಾರು 15 ರಿಂದ 20 ಸಣ್ಣ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ತೆರವುಗೊಳಿಸಿದರು.












ಕಾರ್ಯಾಚರಣೆಯ ಸಂದರ್ಭದಲ್ಲಿ ಇಲ್ಲಿನ ಕಾವೂರು ಠಾಣೆಯ ಪೊಲೀಸ್ ಸಿಬ್ಬಂದಿಗಳು ರಕ್ಷಣೆ ಒದಗಿಸಿದರು. ತೆರವು ಕಾರ್ಯಚರಣೆಯಲ್ಲಿ ಬೀದಿ ಬದಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು ಇದು ನಾಗರಿಕರಿಗೆ ಮತ್ತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟು ಮಾಡುತ್ತಿತ್ತು ಎಂದು ಹೇಳಲಾಗಿದೆ.
ತೆರವು ಕಾರ್ಯಚರಣೆ ಸಂದರ್ಭದಲ್ಲಿ ತನ್ನ ಸಣ್ಣ ಅಂಗಡಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ಕಾರ್ಯಚರಣೆಯನ್ನು ತಡೆದಿದ್ದು ಪಾಲಿಕೆಯ ಅಧಿಕಾರಿಯಾದ ಪ್ರವೀಣ್ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ನಗರ ಪಾಲಿಕೆ ಆಯುಕ್ತರ ಸೂಚನೆಯಂತೆ ಈ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಸ್ಷಷ್ಟಪಡಿಸಿದ್ದಾರೆ.
ಇನ್ನು ಬೀದಿ ಬದಿ ವ್ಯಾಪಾರಸ್ಥರು ಸೋಮವಾರ ಮುಂಜಾನೆ 9.30 ಕ್ಕೆ ಕಾವೂರು ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.