ಮಂಗಳೂರು, ಆ. 24(DaijiworldNews/HR): ಕಳೆದ ಹಲವು ದಿನಗಳಿಂದ ಕೋಮಾಕ್ಕೆ ಜಾರಿದ್ದ ವೃದ್ದೆಯೊಬ್ಬರು ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಅಂತ್ಯಸಂಸ್ಕಾರಕ್ಕೆ ಕುಟುಂಬದವರು ಸಿದ್ಧತೆ ನಡೆಸುತ್ತಿರುವಾಗ ಕುತೂಹಲಕಾರಿ ಘಟನೆಯೊಂದು ಸಂಭವಿಸಿದೆ.

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಪಟ್ಟೆಮನೆಯ ಹೇಮಾವತಿ ರೈ(80) ಕೋಮಾಕ್ಕೆ ಜಾರಿ ಸಾವಿನಂಚಿನಲ್ಲಿದ್ದ ವೃದ್ದೆ, ಇನ್ನು ಅವರು ಬದುಕುವುದು ಕಷ್ಟವೆಂದು ವೈದ್ಯರು ಹೇಳಿ ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದು,ವೃದ್ಧೆಯ ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಸಾವಿನ ಕೊನೆಗಳಿಗೆಯಲ್ಲಿ ಹೇಮಾವತಿ ಅವರು ಚೇತರಿಸಿಕೊಂಡಿದ್ದಾರೆ.
ಅಸ್ವಸ್ಥರಾಗಿದ್ದ ಹೇಮಾವತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕೋಮಾಕ್ಕೆ ಜಾರಿದ್ದ ಅವರು ಆಕ್ಸಿಜನ್ ತೆಗೆದರೆ ಉಳಿಯುವುದು ಕಷ್ಟ ಎಂದಿದ್ದ ವೈದ್ಯರು ಅವರನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆಂಬುಲೆನ್ಸ್ನಲ್ಲಿ ಮನೆಗೆ ಕರೆತರುವಾಗ ಅವರು ಚೇತರಿಸಿಕೊಂಡಿದ್ದು ಇದೀಗ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.