ಮಂಗಳೂರು, ಏ 30 : ರಾಜ್ಯ ವಿಧಾನ ಸಭಾ ಚುನಾವಣೆಯು ಮಹಾತ್ಮ ಗಾಂಧಿ ಮತ್ತು ನಾಥೂರಾಮ್ ಗೋಡ್ಸೆ ಸಿದ್ಧಾಂತಗಳ ನಡುವಿನ ಸ್ಪರ್ಧೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏ.30ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಕರ್ನಾಟಕದ ಚುನಾವಣೆಯಲ್ಲಿ ಎರಡು ರಾಜಕೀಯ ಸಿದ್ಧಾಂತಗಳ ನಡುವೆ ಹೋರಾಟ ಪ್ರಾರಂಭವಾಗಿದೆ ಎಂದರು. ಈ ಹೋರಾಟದಲ್ಲಿ ಅಭಿವೃದ್ದಿಯ ವಿಚಾರವೂ ಒಳಗೊಂಡಿದ್ದು, ಮಹಾತ್ಮ ಗಾಂಧಿ ಅವರ ಸರ್ವಧರ್ಮಗಳ ಸಮಾನತೆಯ ಸಿದ್ಧಾಂತ ಮತ್ತು ನಾಥೂರಾಮ್ ಗೋಡ್ಸೆಯ ಹಿಂಸೆಯ ಸಿದ್ದಾಂತಗಳು ಸ್ಪರ್ಧೆಗೆ ಇಳಿದಿವೆ. ಈ ಸ್ಪರ್ಧೆಯಲ್ಲಿ ಜನ ಬೆಂಬಲ ಮಹಾತ್ಮ ಗಾಂಧಿ ಸಿದ್ಧಾಂತಕ್ಕೆ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು.
ಕೇಂದ್ರದ ಮೋದಿ ಸರ್ಕಾರವೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲವಾಗಿದೆ. ಕರ್ನಾಟಕದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಆದರೆ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಜನರಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದರು. ಮೋದಿ ದೇಶದ ಇತಿಹಾಸದಲ್ಲಿ ಕಂಡ ’ಮಹಾನ್ ಸುಳ್ಳುಗಾರ ಪ್ರಧಾನಿ” ಎಂದು ವ್ಯಂಗ್ಯವಾಡಿದರು.
ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆದ ಒಂದು ವರ್ಷದೊಳಗೆ ಸಾವಿರ ನಕಲಿ ಎನ್ ಕೌಂಟರ್ ನಡೆದಿವೆ. 38 ಜನರು ಬಲಿಯಾಗಿದ್ದಾರೆ . ಹೀಗಿರುವಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಗೂಬೆ ಕೂರಿಸಲು ಬಿಜೆಪಿ ನಾಯಕರು ವ್ಯರ್ಥ ಪ್ರಯತ್ನ ಪಡುತ್ತಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೆ ಬಿಜೆಯೂ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯ ಸಂಚುಕೋರ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಅವರ ನಿಕಟವರ್ತಿಗಳಿಗೂ ಟಿಕೆಟ್ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಪತ್ರಿಕಾಗೋಷ್ಟಿಯಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪಾಲಿಕೆ ಸದಸ್ಯ ನವೀನ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.