ಮಂಗಳೂರು, ಆ. 24 (DaijiworldNews/MB) : ಹಸಿವಿನಿಂದ ಬಳಲುತ್ತಿರುವ ಅನೇಕ ನಿರ್ಗತಿಕರನ್ನು ಗಮನಿಸಿದ ಯುವಕ ನಗರದಲ್ಲಿ ಸಮೋಸಾಗಳನ್ನು ಮಾರಾಟ ಮಾಡಿ ನಿರ್ಗತಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.


ಮಣ್ಣಗುಡ್ಡೆಯ ಬಿನಾಯ್ ಡಿ ಕೋಸ್ತಾ ಎಂಬ ಯುವಕ ಹಸಿವಿನಿಂದ ಬಳಲುತ್ತಿರುವ ಅನೇಕ ನಿರ್ಗತಿಕರನ್ನು ಗಮನಿಸಿದ ಅವರು ತಾನು ಸಮೋಸಾ ಮಾರಿದ ಹಣದಿಂದ ನಿರ್ಗತಿಕರಿಗೆ ಆಹಾರ ನೀಡುತ್ತಿದ್ದಾರೆ.
ಆನ್ಲೈನ್ನಲ್ಲಿ ವ್ಯಾಸಂಗ ಮಾಡುತ್ತಿರುವ ಬಿನಾಯ್ ಅವರು, ತನ್ನ ಸೈಕಲ್ನಲ್ಲಿ ಉರ್ವಾ ಮೀನು ಮಾರುಕಟ್ಟೆಯ ಎದುರು 5 ಮತ್ತು 10 ರೂಗಳಿಗೆ ಸಮೋಸಾಗಳನ್ನು ಮಾರಾಟ ಮಾಡುತ್ತಾರೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ಸಮೋಸಾ ಮುಗಿಯುವವರೆಗೂ ಬಿನಾಯ್ ಮಾರಾಟ ಮಾಡುತ್ತಾರೆ. ಭಾನುವಾರದಂದು ಅನಾಥಾಶ್ರಮಗಳಿಗೆ ಮತ್ತು ನೆಹರೂ ಮೈದಾನದಲ್ಲಿರುವ ನಿರ್ಗತಿಕರಿಗೆ ಆಹಾರವನ್ನು ಪೂರೈಸುತ್ತಾರೆ.
ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿದ ಬಿನಾಯ್ ಅವರು, ''ಗಳಿಸಿದ ಆದಾಯದ ಲಾಭದಲ್ಲಿ ನಿರ್ಗತಿಕರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಎರಡು ವಾರಗಳಿಂದ ಸಮೋಸಾ ಮಾರಾಟ ಮಾಡುತ್ತಿದ್ದೇನೆ. ನಾನು ಪಿಯುಸಿ ಬಳಿಕ ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿಗೆ ದಾಖಾಲಾತಿ ಪಡೆದಿದ್ದು ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಕಾಲೇಜು ತೊರೆದೆ. ಜನವರಿಯಿಂದ ಮಾರ್ಚ್ವರೆಗೆ ಮಣಿಪಾಲದಲ್ಲಿ ಉದ್ಯೋಗ ಮಾಡಿದೆ. ಆದರೆ ಲಾಕ್ಡೌನ್ ಬಳಿಕ ಉದ್ಯೋಗ ಉಳಿಯಲಿಲ್ಲ. ಮೂರು ವಾರಗಳ ಹಿಂದೆ, ನಾನು ಮಾರುಕಟ್ಟೆಗೆ ಭೇಟಿ ನೀಡಿದಾಗ, ಕೆಲವರು ಆಹಾರಕ್ಕಾಗಿ ಅಂಗಲಾಚುತ್ತಿರುವುದನ್ನು ನಾನು ಗಮನಿಸಿದೆ. ಹಸಿವಿನಿಂದ ಹೊಟ್ಟೆಗೆ ಬಟ್ಟೆ ಕಟ್ಟಿರುವವರನ್ನು ನಾನು ಗಮನಿಸಿದೆ. ಆ ಸಂದರ್ಭದಲ್ಲಿ ನನ್ನಲ್ಲಿ ಇದ್ದ ಹಣದಿಂದ ನಾನು ಅವರಿಗೆ ಆಹಾರವನ್ನು ನೀಡಿದೆ. ಈ ಘಟನೆಯಿಂದ ಪ್ರೇರೇಪಿತನಾದ ನನಗೆ ಸಹೋದರಿ ನೀಡಿದ ಸಲಹೆಯಂತೆ ಈಗ ನಿರ್ಗತಿಕರಿಗೆ ಸಹಾಯ ಮಾಡಲು ಆರಂಭಿಸಿದ್ದೇನೆ'' ಎಂದು ಹೇಳಿದ್ದಾರೆ.
''ಉರ್ವಾ ಮಾರುಕಟ್ಟೆಯ ಬಳಿ ನನಗೆ ಅಂಗಡಿ ತೆರೆಯಲು ಯಾರಾದರೂ ಸಹಾಯ ಮಾಡಿದರೆ ಸ್ವಾಗತ. ಇದರಿಂದಾಗಿ ನಾನು ಇನ್ನಷ್ಟು ಜನರಿಗೆ ಸಹಾಯ ಮಾಡಬಹುದು. ನನ್ನ ಪ್ರಯತ್ನವನ್ನು ಗುರುತಿಸಿ ಸರ್ಕಾರ ಪರವಾನಗಿ ನೀಡಬಹುದು. ಆದರೆ ಮಂಗಳೂರು ನಗರ ಪಾಲಿಕೆ ನನಗೆ ಪರವಾನಗಿ ನೀಡಿದ್ದರೂ ಸಹ, ಪಾಲಿಕೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ಅನಿರೀಕ್ಷಿತವಾಗಿ ತೆರವುಗೊಳಿಸಬಹುದು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ'' ಎಂದು ಕೂಡಾ ಈ ಸಂದರ್ಭದಲ್ಲಿ ಹೇಳಿದ್ದಾರೆ.