ಕುಂದಾಪುರ, ಆ. 24(DaijiworldNews/HR): ಕೋವಿಡ್-19 ಪಾಸಿಟಿವ್ ಮೃತದೇಹವನ್ನು ಸಂಬಂಧಿಸಿದ ಕುಟುಂಬದವರಿಗೆ ವೈದ್ಯರ ಉಪಸ್ಥಿತಿಯಲ್ಲಿಯೇ ಹಸ್ತಾಂತರಿಸಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಮೃತದೇಹ ಸಾಗಿಸುವಾಗ ಅದು ಕೋವಿಡ್-19 ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಇರಲಿ ಮೃತದೇಹವನ್ನು ಸಂಬಂಧಿಸಿದ ಕುಟುಂಬದವರಿಗೆ ತೋರಿಸಿ ಕಳುಹಿಸಬೇಕು. ಮತ್ತು ಕೋವಿಡ್ - 19 ಪಾಸಿಟಿವ್ ಮೃತದೇಹವನ್ನು ಹಸ್ತಾಂತರಿಸುವಾಗ ಒಬ್ಬ ಆರೋಗ್ಯ ಅಧಿಕಾರಿ ಸ್ಥಳದಲ್ಲಿ ಇದ್ದು ಪರಿಶೀಲಿಸಿಯೇ ಹಸ್ತಾಂತರಿಸಬೇಕು. ಸಂಜೆ 6 ರಿಂದ ಬೆಳಗ್ಗೆ 9 ಗಂಟೆವರೆಗೆ ಯಾವುದೇ ಶವವನ್ನು ಬಿಟ್ಟು ಕೊಡಬಾರದು. ಶವ ಬಿಟ್ಟುಕೊಡುವ ಜವಾಬ್ದಾರಿ ವೈದ್ಯರಿಗೆ ಇರಬೇಕು ಮತ್ತು ಯಾವುದೇ ಅಜಾಗರೂಕತೆ ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
ಕುಂದಾಪುರದಲ್ಲಿ ಆಗಸ್ಟ್ 23 ರಂದು ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಬೇರೆ ವ್ಯಕ್ತಿಯ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಿದ ವಿಲಕ್ಷಣ ಘಟನೆ ಕೋಟೇಶ್ವರದಲ್ಲಿ ನಡೆದಿದ್ದು, ಈ ವಿಷಯವು ಅಂತಿಮ ಸಂಸ್ಕಾರ ನಡೆಯಲಿದ್ದ ಕೆಲವೇ ನಿಮಿಷಗಳ ಮೊದಲು ಬೆಳಕಿಗೆ ಬಂದ ಘಟನೆ ನಡೆದಿತ್ತು.
ಕೋಟೇಶ್ವರ ನಿವಾಸಿ ಗಂಗಾಧರ್ ಆಚಾರ್ಯ (65) ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಅವರ ದೇಹವನ್ನು ಕೊರೊನಾ ನಿಯಮಾವಳಿ ಪ್ರಕಾರವಾಗಿ ಸಂಪೂರ್ಣವಾಗಿ ಪ್ಯಾಕ್ ಮಾಡಿ ಆಂಬುಲೆನ್ಸ್ ಮೂಲಕ ಹಳೇಕೋಟೆ ಸ್ಮಶಾನಕ್ಕೆ ತರಲಾಗಿತ್ತು. ಅಂತಿಮ ಸಂಸ್ಕಾರ ನಡೆಸುವ ಸಂದರ್ಭದಲ್ಲಿ ಪ್ಯಾಕ್ನ್ನು ತೆರೆದಾಗ ಮೃತದೇಹ ಗಂಗಾಧರ ಅವರದಲ್ಲ ಎಂದು ತಿಳಿದು ಬಂದಿತ್ತು. 65 ವರ್ಷದ ಗಂಗಾಧರ್ ಆಚಾರ್ಯರ ಶವದ ಬದಲಾಗಿ ಓರ್ವ ಯುವಕನ ಮೃತದೇಹವು ಕುಟುಂಬಕ್ಕೆ ಅಂತಿಮ ಸಂಸ್ಕಾರ ನಡೆಸಲು ನೀಡಲಾಗಿತ್ತು.