ಕಾಸರಗೋಡು, ಆ 24 (DaijiworldNews/MSP): ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧವನ್ನು ಹಿಂತೆಗೆದುಕೊಂಡು ಕೇಂದ್ರ ಸರಕಾರ ಮಾರ್ಗಸೂಚಿ ಹೊರಡಿಸಿದ್ದರೂ ಕೇರಳ ಸರಕಾರ ನಿಯಮ ಉಲ್ಲಂಘಿಸಿದ್ದು , ಇದರಿಂದ ಗಡಿನಾಡಿನ ಜನರು ಕರ್ನಾಟಕಕ್ಕೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಈ ಹಿನ್ನಲೆಯಲ್ಲಿ ಆ.25 ರ ಮಂಗಳವಾರ ಕಾಸರಗೋಡು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪಾಸ್ ಉಲ್ಲಂಘನೆ ಹೋರಾಟ ನಡೆಸಲಿದ್ದು , ತಲಪಾಡಿ ಗಡಿ ಮೂಲಕ ಕರ್ನಾಟಕಕ್ಕೆ ಸಂಚರಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪಾಸ್ ಇಲ್ಲದೆ ತಲಪಾಡಿ ಗಡಿ ಮೂಲಕ ಕರ್ನಾಟಕಕ್ಕೆ ಪ್ರಯಾಣಿಸಿ ಮರಳಲು ತೀರ್ಮಾನಿಸಲಾಗಿದೆ.
ಕಾಸರಗೋಡು ಹಾಗೂ ಕೇರಳದ ಇತರ ಕಡೆಗಳಿಂದ ದಿನಂಪ್ರತಿ ಸಾವಿರಾರು ಮಂದಿ ಮಂಗಳೂರು ಹಾಗೂ ರಾಜ್ಯದ ಇತರ ಕಡೆಗಳಿಗೆ ಉದ್ಯೋಗ , ವ್ಯವಹಾರ , ಆಸ್ಪತ್ರೆ ಹಾಗೂ ಇನ್ನಿತರ ಕಾರಣಗಳಿಗಾಗಿ ತೆರಳುತ್ತಿದ್ದಾರೆ. ಆದರೆ ಕೇರಳ ಸರಕಾರ ಗಡಿ ತೆರೆಯಲು ಹಿಂದೇಟು ಹಾಕಿದ್ದು , ಪಾಸ್ ಹೊಂದಿದವರಿಗೆ ಮಾತ್ರ ಅಂತಾರಾಜ್ಯ ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಆ.25 ರ ಮಂಗಳವಾರ ಪಾಸ್ ಉಲ್ಲಂಘನೆ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ಬೆಳಿಗ್ಗೆ 10 ಗಂಟೆಗೆ ತಲಪಾಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ಈ ಹೋರಾಟವನ್ನು ಉದ್ಘಾಟಿಸಲಿದ್ದಾರೆ.