ಕಾಸರಗೋಡು, ಆ. 24 (DaijiworldNews/SM): ಎರಡನೇ ಬಾರೀ ಕ್ವಾರಂಟೈನ್ ನಿಂದ ಕೊರೊನಾ ಸೋಂಕಿತ ಆರೋಪಿ ಪರಾರಿಯಾದ ಘಟನೆ ನಡೆದಿದ್ದು, ಈತನಿಗಾಗಿ ಶೋಧ ನಡೆಯುತ್ತಿದೆ. ಕಾಸರಗೋಡು ತೆಕ್ಕಿಲ್ ಮಾಂಗಾಡ್ ನ ರಂಶಾನ್ ಸೈನುದ್ದೀನ್(20) ಪರಾರಿಯಾದವನು.

ಕಣ್ಣೂರು ಎಡಕ್ಕಾಡ್ ಕ್ವಾರಂಟೈನ್ ಕೇಂದ್ರದಿಂದ ಕೆಲ ದಿನಗಳ ಹಿಂದೆ ಪರಾರಿಯಾಗಿ ಈತನನ್ನು ಹಿಡಿದು ಬಳಿಕ ಅಂಜರ ಕಂಡಿಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು . ಈ ಕೆಂದ್ರದಿಂದಲೂ ಈತ ತಪ್ಪಿಸಿಕೊಂಡಿದ್ದು , ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ವಾಹನ ಕಳವು ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯಾಗಿರುವ ಈತನನ್ನು ಎಡಕ್ಕಾಡ್ ಪೊಲೀಸರು ಬಂಧಿಸಿ ಕ್ವಾರಂಟೈನ್ ನಲ್ಲಿರಿಸಿದ್ದರು. ಈ ನಡುವೆ ಈತ ತಪ್ಪಿಸಿಕೊಂಡಿದ್ದನು. ಬಳಿಕ ಈತನನ್ನು ಕಳೆದ ಬುಧವಾರ ಚೆಮ್ನಾಡ್ ಸೇತುವೆ ಸಮೀಪದಿಂದ ಕಾಸರಗೋಡು ಸರ್ಕಲ್ ಇನ್ಸ್ ಪೆಕ್ಟರ್ ಪಿ. ರಾಜೇಶ್ ನೇತೃತ್ವದ ಪೊಲೀಸ್ ತಂಡ ಬಂಧಿಸಿ ಎಡಕ್ಕಾಡ್ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಆರೋಪಿಯನ್ನು ಅಂಜರಕಂಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿಗಾ ಕೇಂದ್ರದಲ್ಲಿರಿಸಲಾಗಿತ್ತು. ಈ ಕೇಂದ್ರದಿಂದ ಸೋಮವಾರ ಬೆಳಿಗ್ಗೆಯಿಂದ ತಪ್ಪಿಸಿ ಪರಾರಿಯಾಗಿದ್ದಾನೆ. ಈತನಿಗಾಗಿ ಕಣ್ಣೂರು ಚಕ್ಕರಕ್ಕಲ್ ಹಾಗೂ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ, ಈ ನಡುವೆ ಈತನ ಕೊರೊನಾ ತಪಾಸಣಾ ವರದಿ ಇಂದು ಬಂದಿದ್ದು, ಪಾಸಿಟಿವ್ ಎಂದು ದ್ರಢಪಟ್ಟಿದೆ.