ಬಂಟ್ವಾಳ, ಆ.24 (DaijiworldNews/SM): ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆದು ರಾಜ್ಯದ ಜನತೆಯ ಗಮನ ಸೆಳೆದಿದ್ದ ಬಂಟ್ವಾಳ ಕಂಚಿಕಾರ ಪೇಟೆಯ ಕೌಶಿಕ್ ನ ವಿದ್ಯಾಭ್ಯಾಸ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೀಡಿದ ಭರವಸೆಯಂತೆ ನೆರವಾಗಿದ್ದು, ಇದೀಗ ವಿದ್ಯಾರ್ಥಿ ಮೂಡಬಿದಿರೆಯ ಆಳ್ವಾಸ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆಗೊಂಡಿದ್ದಾನೆ.

ಮೂಡಬಿದಿರೆಯ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಡಾ. ಮೋಹನ್ ಆಳ್ವ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು ಶಿಕ್ಷಣಕ್ಕೆ ದಾಖಲಾತಿ ವ್ಯವಸ್ಥೆಗೆ ಕ್ರಮಕೈಗೊಂಡಿದ್ದಾರೆ. ಶಾಸಕರ ಮಾತಿನಂತೆ ಮೋಹನ್ ಆಳ್ವ ಅವರು ಕೌಶಿಕ್ ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕೌಶಿಕ್ ನ ಆಸೆಯಂತೆ ಶಾಸಕರು ಮುತುವರ್ಜಿ ವಹಿಸಿ ಮೋಹನ್ ಆಳ್ವ ಅವರು ವಾಣಿಜ್ಯ ವಿಭಾಗದಲ್ಲಿ ಪಿ.ಯು.ಸಿ. ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಕೊಟ್ಟ ಮಾತು ಉಳಿಸಿದ ಶಾಸಕರು:
ಕಾಲಿನ ಬೆರಳಿನ ಮೂಲಕ ಎಸ್.ಎಸ್ .ಎಲ್.ಸಿ. ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾದ ಸಂದರ್ಭದಲ್ಲಿ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಕೌಶಿಕ್ ನ ಫಲಿತಾಂಶವನ್ನು ನೋಡಿಕೊಂಡು ಆತನ ಇಚ್ಚೆಯ ವಿಷಯದಲ್ಲಿ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಬ್ದಾರಿಯನ್ನು ವಹಿಸುವುದಾಗಿ ಭರವಸೆ ನೀಡಿದ್ದರು. ಅವರು ನೀಡಿದ ಮಾತಿನಂತೆ ಕೌಶಿಕ್ ನ ಪಿ.ಯು.ಸಿ. ವಿದ್ಯಾಭ್ಯಾಸ ಕ್ಕೆ ದಾಖಲಾತಿಯನ್ನು ಮಾಡಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.