ಮಂಗಳೂರು, ಏ 30: ಕೊಣಾಜೆಯ ಕಾರ್ತಿಕ್ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಯುವಕನ ತಂಗಿ, ಕಾವ್ಯಶ್ರೀ, ಹಾಗೂ ಇತರ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಏ. 30 ರ ಸೋಮವಾರ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಸ್ಯಾಕ್ಷ್ಯಧಾರಗಳ ಕೊರತೆಯಿಂದ ಕೇಸು ಖುಲಾಸೆಗೊಳಿಸಿದ ನ್ಯಾಯಾಧೀಶ ಕೆ.ಎಸ್ ಬಿಲಗಿ, ಆರೋಪಿಗಳಾದ ಗೌತಮ್ ಕಯ್ಯ ಯಾನೆ ಮುನ್ನ, ಕಾವ್ಯಶ್ರೀ , ಗೌರವ್ ಕಯ್ಯ ಯಾನೆ ಪ್ರೀತಮ್ ಇವರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದರು. ಆರೋಪಿಗಳ ಪರ ವಕೀಲರಾದ ಉದಯನಂದ ಎ, ಇಲ್ಯಾಸ್ ವಾಮಂಜೂರು, ಅವೀಶ್ ಬೈತಡ್ಕ, ವೇಣು ಕುಮಾರ್ ಚೈತ್ವರ ವಾದಿಸಿದ್ದರು.
ಘಟನೆಯ ವಿವರ:
ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ನಿವಾಸಿ ಕಾರ್ತಿಕ್ರಾಜ್ ಅವರು 2016ರ ಅಕ್ಟೋಬರ್ 22ರ ಬೆಳಗ್ಗೆ 5.30ರ ವೇಳೆಯಲ್ಲಿ ಕೊಣಾಜೆ ವ್ಯಾಪ್ತಿಯ ಗಣೇಶ್ ಮಹಲ್ ಬಳಿ ವಾಕಿಂಗ್ ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ಕೃತ್ಯವನ್ನು ಗಮನಿಸಿದ್ದ ಸ್ಥಳೀಯರು ಗಾಯಗೊಂಡ ಕಾರ್ತಿಕ್ರಾಜ್ರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಕಾರ್ತಿಕ್ರಾಜ್ ಅವರ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಣಾಜೆ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಕಾರ್ತಿಕ್ರಾಜ್ ಅವರ ಸಹೋದರಿ ಕಾವ್ಯಶ್ರೀ ಅಣ್ಣನ ಕೊಲೆಗಾಗಿ ಸ್ನೇಹಿತರಾದ ಗೌತಮ್, ಗೌರವ್ ಎಂಬುವವರಿಗೆ 5 ಲಕ್ಷ ರೂ.ಸುಪಾರಿ ನೀಡಿದ್ದರು ಎಂದು ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕೋರ್ಟ್ ಮೆಟ್ಟಿಲೇರಿಸಿದ್ದರು. ಪ್ರಕರಣ ಜಿಲ್ಲೆಯಲ್ಲಿ ಭಾರೀ ಸಂಚಲವನ್ನುಂಟು ಮಾಡಿತ್ತು.