ಮಂಗಳೂರು, ಆ. 25 (DaijiworldNews/MB) : ರಾಜ್ಯ ಸರ್ಕಾರವು ಸೋಮವಾರ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಸಂಬಂಧಿಸಿ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದಲ್ಲಿ ಗಡಿಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗಿಲ್ಲ ಹಾಗೂ ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಆದೇಶದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಎಲ್ಲಾ ಗಡಿಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದೆ.

ಪರಿಷ್ಕೃತ ಮಾರ್ಗಸೂಚಿ ಪ್ರಕಾರವಾಗಿ, ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ ಹಾಗೂ ಗಡಿಯಲ್ಲಿ ಅವರು ತಪಾಸಣೆಗೆ ಒಳಗಾಗಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಅವರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸಂಜೆಯಿಂದ ಎಲ್ಲಾ ಗಡಿಗಳನ್ನು ಪ್ರಯಾಣ ಮುಕ್ತವಾಗಿಸಿದ್ದು ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ಬರುವ ಜನರಿಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ ಇತರ ರಾಜ್ಯಗಳಿಗೆ ತೆರಳುವ ಕರ್ನಾಟಕದ ಜನರು ಆಯಾ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಪಾಲಿಸಬೇಕಾಗಿದೆ.
ಇನ್ನು ಈ ನಡುವೆ ಪಾಸ್ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡುವ ಕೇರಳ ಸರ್ಕಾರದ ನಿಲುವನ್ನು ವಿರೋಧಿಸಿ ಬಿಜೆಪಿಯು ಮಂಗಳವಾರ ಜಿಲ್ಲಾ ಗಡಿಯಲ್ಲಿ ಪಾಸ್ ಉಲ್ಲಂಘನೆ ಆಂದೋಲನಕ್ಕೆ ಮುಂದಾಗಲಿದೆ. ಈ ಆಂದೋಲನದ ಭಾಗವಾಗಿ ಬಿಜೆಪಿ ಕಾರ್ಯಕರ್ತರು ಪಾಸ್ ಇಲ್ಲದೆ ಕರ್ನಾಟಕಕ್ಕೆ ಪ್ರವೇಶಿಸಿ ನಂತರ ಕೇರಳಕ್ಕೆ ಮರಳಲಿದ್ದಾರೆ. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಶ್ರೀಕಾಂತ್ ಅವರು ಆಂದೋಲನವನ್ನು ಉದ್ಘಾಟಿಸಲಿದ್ದಾರೆ.