ಬೆಳ್ಮಣ್, ಆ 25 (Daijiworld News/MSP): ಕೊರೊನಾ ಹಾವಳಿಯಿಂದ ಕಂಗೆಟ್ಟು ಹೋಗಿರುವ ಬೆಳ್ಮಣ್ ಗ್ರಾಮದ ಜನರನ್ನು ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ರ್ಯಾಪಿಡ್ ಟೆಸ್ಟ್ ನಡೆಸಬಾರದು ಈಗಾಗಲೇ ಬೆಳ್ಮಣ್ ಜನತೆ ಸೀಲ್ ಡೌನ್ ಹಾಗೂ ರ್ಯಾಪಿಡ್ ಟೆಸ್ಟ್ಗಳಿಂದ ರೋಸಿ ಹೋಗಿದ್ದು ತೊಂದರೆ ಅನುಭವಿಸಿದ್ದಾರೆ ರ್ಯಾಪಿಡ್ ಟೆಸ್ಟ್ ನಡೆಸುವುದಕ್ಕೆ ವಿರೋಧವಿದೆ ಎಂದು ಬೆಳ್ಮಣ್ ಪೇಟೆಯ ವರ್ತಕರು ಹಾಗೂ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಬೆಳ್ಮಣ್ ನಲ್ಲಿ ಸೋಮವಾರ ನಡೆದಿದೆ.



ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಜಮಾಯಿಸಿದ ಬೆಳ್ಮಣ್ ಪೇಟೆ ಪರಿಸರದ ವರ್ತಕರು ಹಾಗೂ ನಾಗರಿಕರು ರ್ಯಾಪಿಡ್ ಟೆಸ್ಟ್ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಆರೋಗ್ಯ ಇಲಾಖೆ ಸಹಿತ ಪಂಚಾಯತಿ ಹಾಗೂ ಅಧಿಕಾರಿಗಳಿಗೆ ಮನವಿಯನ್ನು ನೀಡಿದರು. ಈಗಗಲೇ ಪೇಟೆ ಪರಿಸರದಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿದ್ದು ಇಲ್ಲಿನ ಜನ ಸ್ವಯಂ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ, ಸ್ವಯಂ ಸೀಲ್ಡೌನ್ ಮಾಡಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ೫ ತಿಂಗಳುಗಳಿಂದ ಯಾವುದೇ ಕೆಲಸ , ವ್ಯವಹಾರಗಳಿಲ್ಲದೆ ಜನ ಅತಂತ್ರರಾಗಿದ್ದಾರೆ ಇದೀಗ ಮತ್ತೆ ರ್ಯಾಪಿಡ್ ಟೆಸ್ಟ್ನ ಬಗ್ಗೆ ಸ್ಥಳೀಯಾಡಳಿತ ವರ್ತರನ್ನು ಹಾಗೂ ನಾಗರಿಕರಿಗೆ ಒತ್ತಾಯ ಹೇರಲಾಗುತ್ತಿದ್ದು ಈ ಕ್ರಮವನ್ನು ಕೂಡಲೇ ಕೈ ಬಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಿಡಿಓ ವಿರುದ್ದ ಜನಾಕ್ರೋಶ : ಕರೋನಾ ಟೆಸ್ಟ್ ನಡೆಸದಿದ್ದರೆ ಅಂಗಡಿಯ ಪರವಾನಿಗೆ ರದ್ದು ಮಾಡುತ್ತೇವೆ ಎಂದು ಉಡಾಪೆಯ ಮಾತುಗಳನ್ನಾಡಿದ ಬೆಳ್ಮಣ್ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಯನ್ನು ಜನ ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕಾಗಮಿಸಿದ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಾತನಾಡಿ ಮೇಲಾಧಿಕಾರಿಗಳ ಆದೇಶದಂತೆ ಮುಂದುವರಿದಿದ್ದು ಸೋಮವಾರ ನಡೆಸುವಂತೆ ತಿಳಿಸಲಾಗಿತ್ತು ಆದರೆ ಕಾರಣಾಂತರದಿಂದ ರ್ಯಾಪಿಡ್ ಟೆಸ್ಟ್ ನಡೆಸಲಿಲ್ಲ ಎಂದು ಹೇಳಿದರು.
ಇದೇ ಸಂದರ್ಭ ವರ್ತಕರು ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.