ಉಡುಪಿ, ಆ. 25 (DaijiworldNews/MB) : ಶನಿವಾರ ಕುಂದಾಪುರದಲ್ಲಿ ಶವ ಅದಲು ಬದಲು ಆದ ಘಟನೆಯ ಬಗ್ಗೆ ರಾಜ್ಯ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿಯವರು ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿ ಮಾಹಿತಿ ಪಡೆದರು.

ಸಂಬಂಧಿಕರು ಶವದ ಗುರುತು ಪತ್ತೆ ಹಚ್ಚಿದ ಬಳಿಕವೇ ಅದನ್ನು ರವಾನೆ ಮಾಡಿ ಎಂದು ಸೂಚನೆ ನೀಡಿದರು. ಹಾಗೆಯೇ ವ್ಯಕ್ತಿಯು ಕೊರೊನಾ ಸೋಂಕಿತರು ಆಗಿರಲಿ, ಆಗಿರದಿರಲಿ ಎಲ್ಲಾ ಸಂದರ್ಭದಲ್ಲೂ ಸಂಬಂಧಿಕರು ಶವದ ಗುರುತು ಪತ್ತೆ ಹಚ್ಚಿದ ಬಳಿಕ ರವಾನಿಸಬೇಕು. ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹ ಬಂದ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಯೊಬ್ಬರು ಸ್ಥಳದಲ್ಲೇ ಇರಬೇಕು ಎಂದು ಹೇಳಿದ್ದಾರೆ.
ಶಾಸಕ ಕೆ ರಘುಪತಿ ಭಟ್ ಅವರು ಸಚಿವ ಬೊಮ್ಮಾಯಿಯವರಿಗೆ ಈ ಸಲಹೆಯನ್ನು ನೀಡಿದರು.
ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಬೇರೆ ವ್ಯಕ್ತಿಯ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಿದ ಘಟನೆ ಕೋಟೇಶ್ವರದಲ್ಲಿ ಶನಿವಾರ ನಡೆದಿತ್ತು. ಈ ವಿಷಯವು ಅಂತಿಮ ಸಂಸ್ಕಾರ ನಡೆಯಲಿದ್ದ ಕೆಲವೇ ನಿಮಿಷಗಳ ಮೊದಲು ಬೆಳಕಿಗೆ ಬಂದಿತ್ತು.