ಮಂಗಳೂರು, ಮೇ 01 : 2009 ರಲ್ಲಿ ನಗರದಲ್ಲಿ ನಡೆದಿದ್ದ ಪಬ್ ದಾಳಿ ಪ್ರಕರಣದ ೨೬ ಆರೋಪಿಗಳನ್ನು ಖುಲಾಸೆಗೊಳಿಸಿ ಎರಡನೇಯ ಜೆಎಂಎಫ್ ನ್ಯಾಯಾಲಯ ಹೊರಡಿಸಿದ್ದ ಅದೇಶವನ್ನು ಪ್ರಶ್ನಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಶಿಫಾರಸು ಮಾಡಿ ಅಭಿಯೋಜನಾ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಒಪ್ಪಿಗೆ ನೀಡಿದ್ದಾರೆ.
ಪಬ್ ದಾಳಿ ಪ್ರಕರಣದ ವಿಚಾರಣೆ ನಡೆಸಿದ್ದ ಎರಡನೇ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ, ಆರ್. ಮಂಜುನಾಥ್, ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಾ. 12 ರಂದು ಆದೇಶ ಹೊರಡಿಸಿದ್ದರು. ನ್ಯಾಯಲಯದ ಆದೇಶವನ್ನು ಅಧ್ಯಯನ ಮಾಡಿದ ಬಳಿಕ ಮೇಲ್ಮನವಿ ಸಲ್ಲಿಸಲು ಅಭಿಯೋಜನಾ ಇಲಾಖೆ ನಿರ್ಧರಿಸಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ಹೊರಡಿಸಿದ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿಬೇಕಾದರೆ ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ ೨೭೮ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟರ ಸಮ್ಮತಿ ಅಗತ್ಯ. ಹಾಗಾಗಿ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಎರಡನೇಯ ಜೆಎಂಎಫ್ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್, ಮಾ. 28 ರಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿನ್ ಅವರಿಗೆ ಪ್ರಸ್ತಾಪ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಶನಿವಾರ ಅದಕ್ಕೆ ಒಪ್ಪಿಗೆ ನೀಡಿದರು.