ಮಂಗಳೂರು, ಮೇ 01: ಕ್ರಿಮಿನಲ್ ಕೃತ್ಯಗಳಿಗೆ ಬಿಲ್ಲವ ಯುವಕರನ್ನು ಬಳಸಿಕೊಂಡು, ನಂತರ ಚುನಾವಣೆಯಲ್ಲಿ ಬಿಲ್ಲವರಿಗೆ ಟಿಕೆಟ್ ನೀಡದೆ ಬಿಜೆಪಿಯೂ ಮೋಸ ಮಾಡಿದ್ದು, ಹೀಗಾಗಿ ಬಿಜೆಪಿಯಿಂದ ಬಿಲ್ಲವರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವೂ ಮೊದಲಿನಿಂದಲೂ, ಪೂಜಾರಿ ಸಮುದಾಯದವರಿಗೆ ಸೂಕ್ತಸ್ಥಾನ ನೀಡುತ್ತಾ ಬಂದಿದೆ. ಆದರೆ ಈ ಬಗ್ಗೆ ಅಪಪ್ರಚಾರ ಮಾಡುವುದು ಬಿಜೆಪಿ ಪಕ್ಷದ ಕೆಲಸ ಎಂದು ಆರೋಪಿದರು.
ವಿನಯ್ ಕುಮಾರ್ ಸೊರಕೆ,ಮತ್ತು ಜನಾರ್ಧನ ಪೂಜಾರಿ ಅವರು ಕಾಂಗ್ರೆಸ್ ಮುಖಂಡರು ನಮ್ಮ ಅಂತರಿಕ ವಿಚಾರಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಈ ಬಗ್ಗೆ ಬಿಜೆಪಿ ಮುಖಂಡರು ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಎಂದಿಗೂ ಜಾತಿಯ ಆಧಾರದಲ್ಲಿ ರಾಜಕೀಯ ಮಾಡಿಲ್ಲ, ಮಾಡುವುದು ಇಲ್ಲ. ಸರ್ವರಿಗೆ ಸಮಬಾಳು ಎನ್ನುವುದು ಕಾಂಗ್ರೆಸ್ ಪಕ್ಷದ ಸಿದ್ದಾಂತ. ಆದರೆ ಇದು ಬಿಟ್ಟು ಬಿಜೆಪಿ ಜಾತಿಯ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಿಂದುತ್ವದ ನೆಲೆಯಲ್ಲಿ ಪ್ರಚಾರ ಮಾಡುತ್ತಿದೆ ಈ ಬಗ್ಗೆ ಚುನಾವನಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.