ಮಂಗಳೂರು, ಆ. 26 (DaijiworldNews/MB) : ಕಳೆದ ನಾಲ್ಕೈದು ತಿಂಗಳಿನಿಂದ ನಗರದ ಶರವು ಮಹಾಗಣಪತಿ ದೇವಸ್ಥಾನ ಬಳಿಯ ಮಹಿಳಾ ಪಿಜಿಯಲ್ಲಿ ಯುವತಿಯರ ಬಟ್ಟೆಗಳನ್ನು ಕದ್ದು ಅಸಭ್ಯ ವರ್ತನೆ ತೋರುತ್ತಿದ್ದ ವಿಕೃತಕಾಮಿಯೋರ್ವನನ್ನು ಯುವತಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ನೀಡಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಸುಮಾರು 40ಕ್ಕೂ ಅಧಿಕ ಯುವತಿಯರು ವಾಸವಿರುವ ಶರವು ದೇವಸ್ಥಾನ ಬಳಿಯ ಪಿಜಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಈ ವಿಕೃತಕಾಮಿ ರಾತ್ರಿ ಬಂದು ಯುವತಿಯರ ಬಟ್ಟೆಯನ್ನು ಕದಿಯುವ ಮೂಲಕ ವಿಕೃತಿ ಮೆರೆಯುತ್ತಿದ್ದ. ಅಷ್ಟೇ ಅಲ್ಲದೆ ಯುವತಿಯರ ಕೋಣೆಗೆ ಬಂದು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ.
ಇನ್ನು ಈತನನ್ನು ಈ ಹಿಂದೆ 2 ಬಾರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು ಆತ ಮಾತ್ರ ಯುವತಿಯರ ಪಿಜಿಗೆ ಬರುವುದನ್ನು ನಿಲ್ಲಿಸಿರಲಿಲ್ಲ. ಹಾಗೆಯೇ ಪೊಲೀಸರು ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಆತನನ್ನು ವಶಕ್ಕೆ ಪಡೆದ ಮರುದಿನವೇ ಬಿಡುಗಡೆ ಮಾಡಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಲಾಗಿದ್ದು ಪೊಲೀಸರ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಂಗಳವಾರ ತಡರಾತ್ರಿ ಮತ್ತೆ ಈ ವಿಕೃತಕಾಮಿ ಯುವತಿಯೊರ್ವಳ ರೂಮ್ಗೆ ಬಂದು ಆಕೆಯ ಬಟ್ಟೆಯನ್ನು ಟೆರೇಸ್ ಮೇಲೆ ಕೊಂಡೊಯ್ದು ಟೆರೇಸ್ ಮೇಲೆ ಇರಿಸಿದ್ದ. ಇದನ್ನು ಗಮನಿಸಿದ ಯುವತಿಯರು ಜೊತೆ ಸೇರಿ ಆತನನ್ನು ಹುಡುಕಾಡಿದ್ದು ಆತ ಟೆರೇಸ್ ಮೇಲೆ ಇರುವುದು ಗಮನಕ್ಕೆ ಬಂದ ಕೂಡಲೇ ಆತನಿಗೆ ಧರ್ಮದೇಟು ನೀಡಿದ್ದಾರೆ.
ಆರೋಪಿ ಕೇರಳ ಮೂಲದವನು ಎಂದು ತಿಳಿದು ಬಂದಿದ್ದು ಧರ್ಮದೇಟು ತಿಂದು ಅಲ್ಲಿಂದ ತಪ್ಪಿಸಿಕೊಂಡು ಖಾಸಗಿ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಈ ವಿಕೃತ ಕಾಮಿಯ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯುವತಿಯರು ಒತ್ತಾಯಿಸಿದ್ದಾರೆ.