ಬೆಂಗಳೂರು,ಸೆ.04: ಬಿಜೆಪಿ ಭಾರತೀಯ ಯುವ ಮೋರ್ಚಾದ ವತಿಯಿಂದ ಮಂಗಳೂರಿನಲ್ಲಿ ಸೆ.೭ರಂದು ನಡೆಯಲಿರುವ ಯುವ ಮೆರವಣಿಗೆಯನ್ನು ಖಂಡಿಸಿ ಭಾರೀ ವಿರೋಧಗಳು ವ್ಯಕ್ತವಾಗುತ್ತಿರುವ ನಡುವೆಯೇ ಇಂದು ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಕಾನೂನಾತ್ಮಕ ಮೆರವಣಿಗೆಗೆ ಅವಕಾಶ ಮಾಡಿ ಕೊಡಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ನಡೆಸುವ ಹಕ್ಕು ಇದೆ. ಆದರೆ ಯಾರೂ ಕೂಡಾ ಕಾನೂನನ್ನು ಮೀರಿ ಪ್ರತಿಭಟನೆ ನಡೆಸುವ ಹಾಗಿಲ್ಲ. ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಿರುವ ಈ ಜಾಥಕ್ಕೂ ಬಿಜೆಪಿ ಪ್ರತಿಭಟನೆ ಮಾಡಬಹುದು. ಆದರೆ ಕಾನೂನು ಮೀರಿ ನಡೆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಇನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಮೆರವಣಿಗೆ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಮುಖಂಡರು ಹಾಕುತ್ತಿದ್ದ ಒತ್ತಾಯವನ್ನು ಅವರು ಕಡೆಗಣಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮೆರವಣಿಗೆಗೆ ತಡೆಯೊಡ್ಡುವ ರಾಜ್ಯ ಸರಕಾರದ ನೀತಿ ಖಂಡಿಸಿ ಮಾತನಾಡಿದ ಮಾಜಿ ಡಿಸಿಎಂ ಆರ್. ಅಶೋಕ್, ಮೆರವಣಿಗೆ ತಡೆಯುವ ಉದ್ದೇಶ ಪ್ರಜಾತಂತ್ರ ವಿರೋಧ ಕ್ರಮ. ಇದಕ್ಕೆ ಯುವ ಮೋರ್ಚಾ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.