ಕಾಸರಗೋಡು, ಆ. 26 (DaijiworldNews/MB) : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಯೊಂದು ಕುಂಬಳೆಯಿಂದ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಧ್ಯವರ್ತಿಯಾಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟದಂಗಡಿ ಪೆರಿಯಡ್ಕದ ಕಾಲನಿಯ ಸುನಿತಾ (30) ಬಂಧಿತಳು.
2018 ರ ಡಿಸಂಬರ್ 18 ರಂದು ರಾತ್ರಿ ಘಟನೆ ನಡೆದಿತ್ತು. ಉತ್ಸವ ನೋಡಲೆಂದು ಬಾಲಕಿಯನ್ನು ಕರೆದೊಯ್ದು ನಿರ್ಜನ ಸ್ಥಳದಲ್ಲಿ ಕೃತ್ಯ ನಡೆಸಿದ್ದು, ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರಾತ್ರಿ ಓರ್ವ ಆರೋಪಿಯ ಬೈಕ್ ನಲ್ಲಿ ಸುನಿತಾಳು ಬಾಲಕಿಯನ್ನು ಕರೆದುಕೊಂಡು ಹೋಗಿದ್ದು, ಕುಂಬಳೆ ಸರಕಾರಿ ಆಸ್ಪತ್ರೆ ತಲಪಿದಾಗ ಇನ್ನೋರ್ವ ಆರೋಪಿ ಕಾರಿನಲ್ಲಿ ಬಂದಿದ್ದು, ಬಳಿಕ ಯುವತಿ ಸೇರಿದಂತೆ ಮೂವರು ಬಾಲಕಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಕಾಡಿಗೆ ಕರೆದೊಯ್ದು ಇಬ್ಬರು ಕೃತ್ಯ ನಡೆಸಿರುವುದಾಗಿ ಪೊಲೀಸರಿಗೆ ಲಭಿಸಿದ ದೂರನಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ಈ ಬಾಲಕಿಗೆ ಬದಿಯಡ್ಕ ನಿವಾಸಿಯೋರ್ವ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ತನಿಖೆ ನಡೆಸಿದ್ದು, ಈ ಸಂದರ್ಭದಲ್ಲಿ ಕುಂಬಳೆಯಲ್ಲೂ ದೌರ್ಜನ್ಯಕ್ಕೆ ಒಳಗಾಗಿರುವ ಬೆಚ್ಚಿ ಬೀಳುವ ಅಂಶವು ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.