ಮಂಗಳೂರು, ಆ. 26 (DaijiworldNews/MB) : ''ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತಕ್ಕೆ ಮರಳುಗಾರಿಕೆ ನಡೆಸಲು ಅವಕಾಶ ನೀಡುವ ಸರ್ಕಾರದ ಹೊಸ ಮರಳು ನೀತಿಯು ಅಕ್ರಮ ಮರಳುಗಾರಿಕೆಗೆ ಪ್ರಚೋದನೆ ನೀಡುವಂತಿದೆ'' ಎಂದು ಮಾಜಿ ಸಚಿವ ರಾಮನಾಥ್ ರೈ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು ಈ ಹೊಸ ನೀತಿಯಿಂದಾಗಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವವರಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.


ಆಗಸ್ಟ್ 26 ರ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಮನಾಥ್ ರೈ ಅವರು, ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆದು ಕರಾವಳಿ ನಿಯಂತ್ರಣ ವಲಯದಲ್ಲಿ ಮರುಳುಗಾರಿಕೆಗೆ ಅನುಮತಿ ನೀಡಲಾಗಿದೆ. ನಮ್ಮ ಅಧಿಕಾರಾವಧಿಯಲ್ಲಿ ನಾವು 2013-14ರಲ್ಲಿ 3.13 ಕೋಟಿ ರೂ., 2014-15ರಲ್ಲಿ 3.47 ಕೋಟಿ ರೂ., 2015-16ರಲ್ಲಿ 5.11 ಕೋಟಿ ರೂ., 2016-17ರಲ್ಲಿ 3.15 ಕೋಟಿ ರೂ., 2017-18ರಲ್ಲಿ 3.49 ಕೋಟಿ ರೂ. , 2018-19ರಲ್ಲಿ 4.08 ಕೋಟಿ ರೂ. ಮತ್ತು 2019-20ರಲ್ಲಿ 5.25 ಕೋಟಿ ರೂ.ಗಳನ್ನು ಮರಳು ಗಣಿಗಾರಿಕೆಯಿಂದ ರಾಜ್ಯ ಖಜಾನೆಗೆ ತಲುಪಿಸಲಾಗಿದೆ. ಆದರೆ ಪ್ರಸ್ತುತ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಇದರಿಂದಾಗಿ ರಾಜ್ಯದ ಖಜಾನೆಗೆ ಮರುಳುಗಾರಿಕೆಯ ಹಣ ತಲುಪುತ್ತಿಲ್ಲ ಎಂದು ಆರೋಪಿಸಿದರು.
"ದಕ್ಷಿಣ ಕನ್ನಡದ ಅಂದಿನ ಉಪ ಆಯುಕ್ತರು ಹಿರಿತನದ ಆಧಾರದ ಮೇಲೆ 105 ಜನರಿಗೆ ಮರುಳುಗಾರಿಕೆ ನಡೆಸಲು ಅವಕಾಶ ನೀಡಿದ್ದರು. ಅವರು ಪರವಾನಗಿ ಹೊಂದಿದ್ದರು. ಟೆಂಡರ್ ಪ್ರಕ್ರಿಯೆಯ ಮೂಲಕ ಸಿಆರ್ ಝೆಡ್ ವಲಯವನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು. ಈ ಕೋಟಿ ರೂಪಾಯಿಗಳನ್ನು ರಾಜ್ಯ ಖಜಾನೆಗೆ ಸಂಗ್ರಹಿಸಲಾಗಿದೆ. ಆದರೆ ಈಗ ಬಿಜೆಪಿ ಸರ್ಕಾರವು ಈ ಹೊಸ ಮರಳು ನೀತಿ ಖಾಸಗೀಕರಣದ ಮೂಲಕ ಉದ್ಯಮಿಗಳಿಗೆ ಲಾಭ ಮಾಡುವಂತೆ ಅವಕಾಶ ನೀಡಿದೆ. ಜೊತೆಗೆ ಬಿಜೆಪಿಯ ಬೆಂಬಲಿಗರಿಗೆ ಮರಳು ಸುಲಭವಾಗಿ ದೊರೆಯಲು ಹಾಗೂ ಅದರಿಂದ ಲಾಭ ಪಡೆಯುವ ಹುನ್ನಾರ ಇದರ ಹಿಂದೆಯಿದೆ ಎಂದು ದೂರಿದ್ದಾರೆ.
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಮರಳಿನ ಸಮಸ್ಯೆ ಇಲ್ಲ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ. ಸಿಆರ್ಝಡ್ ಅಲ್ಲದ ಕೆಲವು ಪ್ರದೇಶಗಳನ್ನು ಮರಳುಗಾರಿಕೆ ನಡೆಯುತ್ತಿದೆ. ಸಿಆರ್ಝಡ್ ಪ್ರದೇಶಕ್ಕೆ ಮರಳುಗಾರಿಕೆಗೆ ಅನುಮತಿ ನೀಡಿಲ್ಲ. ಆದರೂ ಕೂಡಾ ಬಿಜೆಪಿ ಸರ್ಕಾರದ ಈ ಹೊಸ ನೀತಿಯಿಂದಾಗಿ ಶಾಸಕರ ಸಹಕಾರದೊಂದಿಗೆ ಅಕ್ರಮ ಮರಳುಗಾರಿಕೆ ಕಳೆದ ಒಂಬತ್ತು ತಿಂಗಳಿನಿಂದ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಕಾಂಗ್ರೆಸ್ ಮುಖಂಡರಾದ ನವೀನ್ ಡಿಸೋಜ, ಪೃಥ್ವಿರಾಜ್, ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.