ಮಂಗಳೂರು, ಆ 26 (DaijiworldNews/PY): ಪ್ರತಿ ವರ್ಷದಂತೆ ಈ ವರ್ಷದ ಗಣೇಶೋತ್ಸವದ ವೇಳೆಯೂ ಕ್ರೈಸ್ತ ಸಮುದಾಯದ ಪರವಾಗಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ವತಿಯಿಂದ ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೊ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಉದ್ಯಮಿಗಳು ಮಂಗಳೂರಿನ ಸಂಘನಿಕೇತನಕ್ಕೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಫ್ರ್ಯಾಂಕ್ಲಿನ್ ಮೊಂತೆರೊ ಅವರು, ಬಾಲಗಂಗಾಧರ ತಿಲಕರ ಕನಸ್ಸನ್ನು ನನಸು ಮಾಡುವ ನಿಟ್ಟಿನಲ್ಲಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಭೇಟಿ ಬಹಳ ಪ್ರಮುಖವಾದುದು. ಇದರಿಂದಾಗಿ ಪರಸ್ಪರ ನಂಬಿಕೆಗಳ ಮೇಲಿನ ಗೌರವ ಹಾಗೂ ಸಹಬಾಳ್ವೆ ಸಾಧ್ಯ ಎಂದು ಹೇಳಿದರು.
ಬಳಿಕ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ಪ್ರಭು ಮಾತನಾಡಿ , ಕ್ರೈಸ್ತ ಬಂಧುಗಳು ಪ್ರತಿವರ್ಷ ಇಲ್ಲಿಗೆ ಭೇಟಿಕೊಟ್ಟು ಶುಭಾಶಯಗಳನ್ನು ಸಲ್ಲಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ ಹಾಗೂ ಈ ನಿಟ್ಟಿನಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಈ ನಡೆ ಬಹಳ ಪ್ರಮುಖವಾದುದು. ಮುಂದಿನ ದಿನಗಳಲ್ಲಿ ಇದೊಂದು ಜಗ ಮೆಚ್ಚುವ ಸಂಘಟನೆಯಾಗಲಿ ಎಂದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪದಾಧಿಕಾರಿಗಳಾದ ವಿನೋದ್ ಶೆಣೈ, ಶ್ರೀಕರ್ ಕಿಣಿ, ಯೋಗೀಶ್ ಆಚಾರ್ ಮಣ್ಣಗುಡ್ಡೆ, ಕೆ.ಪದ್ಮನಾಭ, ಕ್ಯಾಥೋಲಿಕ ಸಭೆಯ ಅಧ್ಯಕ್ಷ ರಾಲ್ಫಿ ಡಿಕೋಸ್ತ, ಲ್ಯಾನ್ಸಿ ಡಿಕುನ್ಹಾ, ಜೊಯೆಲ್ ಮೆಂಡೊನ್ಸಾ, ನೆಲ್ಸನ್ ಕ್ಯಾಸ್ತೆಲಿನೊ, ಮರ್ಸಿ ವೀಣಾ, ವಾಲ್ಟರ್ ಮೊನಿಸಾ, ಅರುಣ್ ಕ್ರಾಸ್ಟಾ, ಅನೂಪ್ ಪಯಾಸ್, ರೊನಾಲ್ಡ್ ಸೆರಾವೊ ಮುಂತಾದವರು ಉಪಸ್ಥಿತರಿದ್ದರು.