ಕಾಸರಗೋಡು, ಆ. 26 (DaijiworldNews/SM): ಜಿಲ್ಲೆಯಿಂದ ಕರ್ನಾಟಕಕ್ಕೆ ದೈನಂದಿನ ಸಂಚಾರಕ್ಕೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಮಹತ್ವದ ಆದೇಶ ನೀಡಿದ್ದಾರೆ.

ಬುಧವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಸಲಹಾ ಸಮಿತಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಈ ಮಾಹಿತಿ ನೀಡಿದರು. ದೈನಂದಿನ ಸಂಚಾರಕ್ಕೆ ರೆಗ್ಯುಲರ್ ಪಾಸ್ ವ್ಯವಸ್ಥೆಯನ್ನು ಹಿಂತೆಗೆದುಕೊಂಡಿದ್ದು , ಆದರೆ ಆಂಟಿಜನ್ ತಪಾಸಣೆ ನಡೆಸಿದ ನೆಗಟಿವ್ ಸರ್ಟಿಫಿಕೇಟ್ ಸಹಿತ ಕೋವಿಡ್-19 ಜಾಗೃತಾ ಪೋರ್ಟಲ್ ನಲ್ಲಿ ನೋಂದಾಯಿಸಿದರೆ ಸಾಕಾಗುತ್ತದೆ. ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಇದಕ್ಕಾಗಿ ತಪಾಸಣೆ ನಡೆಸಲು ವ್ಯವಸ್ಥೆಮಾಡಲಾಗಿದೆ. ಪ್ರಯಾಣಿಕರ ಮಾಹಿತಿಗಳನ್ನು ಗೂಗಲ್ ಸ್ಪ್ರೆಡ್ ಶೀಟ್ ನಲ್ಲಿ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಷ್ಟೀಯ ಹೆದ್ದಾರಿ 66ರ ತಲಪಾಡಿ ಅಲ್ಲದೆ ಪಾಣತ್ತೂರು, ಮಾಣಿಮೂಲೆ, ಪೆರ್ಲ, ಜಾಲ್ಸೂರು ಮೊದಲಾದ ಪ್ರಮುಖ ರಸ್ತೆಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಚರಿಸಲು ಅನುಮತಿ ನೀಡಲಾಗಿದೆ. ಈ ರಸ್ತೆಗಳಲ್ಲಿ ಸಂಚರಿಸುವವರಿಗೆ ಆಂಟಿಜನ್ ತಪಾಸಣೆ ನಡೆಸಿ ಕೋವಿಡ್-19 ಪೋರ್ಟಲ್ ನಲ್ಲಿ ನೋಂದಾಯಿಸಬೇಕು . ಈ ರಸ್ತೆ ಮೂಲಕ ತೆರಳುವವರಿಗೆ ಆಂಟಿಜನ್ ತಪಾಸಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಆರೋಗ್ಯ ಸಿಬ್ಬಂದಿಗಗಳನ್ನು ಸ್ಥಳೀಯ ಸಂಸ್ಥೆಗಳು ನೇಮಿಸಬೇಕು ಎಂದು ತಿಳಿಸಿದ್ದಾರೆ.
ಪಾಣತ್ತೂರು, ಮಾಣಿಮೂಲೆ, ಪೆರ್ಲ, ಜಾಲ್ಸೂರು ರಸ್ತೆ ಮೂಲಕ ಗಡಿಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಕರ್ನಾಟಕದಿಂದ ಆಗಮಿಸುವವರಿಗೆ ನೋಂದಾವಣೆ ಮಾಡಬೇಕಿಲ್ಲ. ಆದರೆ ಈ ವ್ಯಕ್ತಿ ಗಡಿಯ ಪಂಚಾಯತ್ ಬಿಟ್ಟು ಬೇರೆ ಸ್ಥಳಕ್ಕೆ ತೆರಳುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆಗೆ ಆಯಾ ಗ್ರಾಮ ಪಂಚಾಯತ್ ಗೆ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ , ಉಪ ಜಿಲ್ಲಾಧಿಕಾರಿ ಅರುಣ್ ಕೆ . ವಿಜಯನ್ , ಜಿಲ್ಲಾ ಆರೋಗ್ಯಾಧಿಕಾರಿ ಡಾ . ಎ . ವಿ ರಾಮ ದಾಸ್ , ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎನ್ . ದೇವಿದಾಸ್ ಹಾಗೂ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.