ಬೆಳ್ತಂಗಡಿ, ಆ 27 (Daijiworld News/MSP): ನಗರದ ಕುತ್ಯಾರು ರಸ್ತೆ ನಿವಾಸಿ ಹಿರಿಯ ಕಾರು ಚಾಲಕ ವಾಸು ಸಪಲ್ಯ(66) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಗ ದಯಾನಂದನ್ನು (32) ಪೊಲೀಸರು ಬುಧವಾರ ರಾತ್ರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದಿದ್ದಾರೆ.

ಆ.24 ರಂದು ವಾಸು ಸಪಲ್ಯ ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆಮಾಡಲಾಗಿತ್ತು.
ಕೃತ್ಯದ ಬಳಿಕ ಇವರ ಮೂರನೇ ಮಗ ದಯಾನಂದ ನಾಪತ್ತೆಯಾಗಿದ್ದ ಕಾರಣ, ಆತನೇ ಕೊಲೆ ನಡೆಸಿರಬಹುದು ಎಂಬ ಅನುಮಾನ ಪೊಲೀಸರಿಗೆ ವ್ಯಕ್ತಪಡಿಸಿದ್ದರು.
ಮುಂಜಾನೆ ವಾಕಿಂಗ್ ಹೊರಟ ತಂದೆಯನ್ನೇ ನಡು ರಸ್ತೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿದ ಬಳಿಕ ದಯಾನಂದ ಮಂಗಳೂರಿನಲ್ಲಿ ಕದ್ರಿ ಕಂಬ್ಳದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ ಆ.26 ರಂದು ರಾತ್ರಿ ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದು ಕರೆತಂದಿದ್ದಾರೆ.
"ತಂದೆ ತನ್ನನ್ನು ಬೈದಿರುವುದಕ್ಕೆ ಕೊಲೆ ನಡೆಸಿರುವುದಾಗಿ"ಎಂಬುದಾಗಿ ದಯಾನಂದ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.