ಕಾಸರಗೋಡು, ಆ 27 (DaijiworldNews/PY): ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವಿನಲ್ಲಿ ಆ.26ರ ಬುಧವಾರ ರಾತ್ರಿ ಇತ್ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಇರಿತಕ್ಕೊಳಗಾಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.

ಮೃತರನ್ನು ಬೇರಿಕೆ ನಿವಾಸಿ ಕೃಪಾಕರ್ (28) ಎಂದು ತಿಳಿದುಬಂದಿದೆ.
ಎರಡು ತಂಡಗಳ ನಡುವೆ ನಡೆದ ಹೊಡೆದಾಟದ ಸಂದರ್ಭ ಇರಿತಕ್ಕೊಳಗಾದ ಕೃಪಾಕರ್ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತ್ತಾದರೂ, ಅವರು ಮೃತಪಟ್ಟಿದ್ದಾರೆ. ಇದಲ್ಲದೇ, ಘಟನೆಯಲ್ಲಿ ಗಾಯಗೊಂಡಿದ್ದ ಜಿತೇಶ್ ಹಾಗೂ ವಿಜೇಶ್ ಎನ್ನುವವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ, ಇತ್ತಂಡಗಳ ನಡುವೆ ಹೊಡೆದಾಟದ ಜಗಳದ ವೇಳೆ ಇರಿತಕ್ಕೊಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಪಾಸಣೆ ಹಾಗೂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.