ಮಂಗಳೂರು, ಆ 27 (DaijiworldNews/PY): ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಗೊಂದಲಕ್ಕೊಳಗಾಗಿದೆ. ಅಲ್ಲದೇ, ರಾಜ್ಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಸಹಕಾರದ ಕೊರತೆ ಇದೆ ಎಂದು ಶಾಸಕ ಯು.ಟಿ ಖಾದರ್ ಆರೋಪಿಸಿದರು.


ಗುರುವಾರ ಮಾಧ್ಯಮಗಳನ್ನುದ್ದೇಶಿ ಮಾತನಾಡಿದ ಅವರು, ಸಾವಿನ ಪ್ರಮಾಣ ಹಾಗೂ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಯಾವುದೇ ಸರಿಯಾದ ಮಾರ್ಗಸೂಚಿಗಳಿಲ್ಲದೇ ದಿನಕ್ಕೆ 100 ರಿಂದ 200 ಜನರಿಗೆ ಪ್ರತಿಜನಕ ಪರೀಕ್ಷೆಗಳನ್ನು ನಡೆಸುವಂತೆ ಕೇಳಿಕೊಂಡಿದ್ದಾರೆ. ಪರೀಕ್ಷೆಗಳನ್ನು ನಡೆಸುವ ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟತೆ ಇರಬೇಕು. ಚಾಲಕರು ಸೇರಿದಂತೆ ಕ್ಲೀನರ್ಗಳು ಹಾಗೂ ಮೀನು ಮಾರಾಟಗಾರರನ್ನು ಪರೀಕ್ಷಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಜವಾಬ್ದಾರಿಯನ್ನು ನೀಡಬೇಕು. ಇಲ್ಲದಿದ್ದಲ್ಲಿ, ಆರೋಗ್ಯ ಇಲಾಖೆಯು ಸರ್ಕಾರ ಹಾಗೂ ಸಾರ್ವಜನಿಕರಿಂದಲೂ ಒತ್ತಡ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಸರ್ಕಾರವು, ರೋಗಿಗಳಿಗೆ ಉಚಿತ ಚಿಕಿತ್ಸೆ ಘೋಷಿಸಿದೆ. ಆದರೆ, ಇಲ್ಲಿಯವರೆಗೆ ಯಾರೂ ಕೂಡಾ ಉಚಿತ ಚಿಕಿತ್ಸೆ ಪಡೆದುಕೊಳ್ಳದ ಕಾರಣ ಜಾರಿಯಾಗಿಲ್ಲ. ರಾಜ್ಯ ಸರ್ಕಾರದಿಂದ ಸರಿಯಾದ ಕ್ರಿಯಾ ಯೋಜನೆ ಇಲ್ಲ. ಇದನ್ನು ಬಿಜೆಪಿ ಸರ್ಕಾರದ ಸುವರ್ಣಾವಧಿ ಎಂದು ಕರೆಯಲಾಗುತ್ತದೆಯೇ? ಬಿಜೆಪಿ ಸಮಾಜ ಅಥವಾ ಜನರನ್ನು ಮಾತ್ರ ವಿಭಜಿಸುವುದಷ್ಟೇ ಅಲ್ಲ, ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ವಿಶ್ವಾಸಾರ್ಹತೆಯನ್ನು ಕೂಡಾ ಜನರು ಅನುಮಾನಿಸುವ ವಾತಾವರಣ ಸೃಷ್ಠಿ ಮಾಡಿದೆ. ಅನೇಕ ರೋಗಿಗಳು ಬಿಲ್ ಪಾವತಿ ಮಾಡುತ್ತಿದ್ದಾರೆ. ಅದನ್ನು ಸಿಎಂ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರವು ಪಿಪಿಇ ಕಿಟ್ಗಳನ್ನು ಕೂಡಾ ಒದಗಿಸಬೇಕು. ಇಲ್ಲದಿದ್ದಲ್ಲಿ ಶೇ.50ರಷ್ಟು ಹಣವನ್ನು ರೋಗಿಗಳು ಪಾವತಿ ಮಾಡಬೇಕಾಗುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ, ಆರೋಗ್ಯ ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಐವಾನ್ ಡಿಸೋಜಾ ಮಾತನಾಡಿ, ರಾಜ್ಯದಲ್ಲಿ 25 ಸಂಸದರು ಲೋಕಸಭೆಯನ್ನು ಪ್ರತಿನಿಧಿಸಲು ಅನರ್ಹರಾಗಿದ್ದಾರೆ. ಅವರಿಗೆ ಪ್ರಧಾನಿ ಅಥವಾ ಸಂಬಂಧಪಟ್ಟ ಮಂತ್ರಿಗಳೊಂದಿಗೆ ಮಾತನಾಡಲು ಧೈರ್ಯವಿಲ್ಲ. ರಾಜ್ಯ ಸಂಕಷ್ಟದಲ್ಲಿದ್ದ ಸಂದರ್ಭ ಅವರು ರಾಜ್ಯಕ್ಕೆ ಬೇಕಾದ ಪರಿಹಾರವನ್ನು ತರುವಲ್ಲಿ ಶ್ರಮಿಸಬೇಕು ಆದರೆ ಅವರು ಪ್ರಧಾನ ಮಂತ್ರಿ ಅಥವಾ ಲೋಕಸಭೆಯಲ್ಲಿ ಮಾತನಾಡುವುದಿಲ್ಲ. ಅವರು ಲೋಕಸಭೆಯಲ್ಲಿ ಪ್ರತಿನಿಧಿಸಲು ಅನರ್ಹರು. ಅವರು ರಾಜೀನಾಮೆ ನೀಡಿ ಮನೆಗೆ ಹೋಗುವುದು ಉತ್ತಮ ಎಂದು ಹೇಳಿದರು.