ಉಡುಪಿ, ಮೇ 01 : ಕರಾವಳಿಯೂ ಪರಶುರಾಮ ಸೃಷ್ಟಿಯ ನಾಡಾಗಿದ್ದು,ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರ ಸೇರಿ ಜಿಲ್ಲೆಯೂ ಅಭೂತಪೂರ್ವ ಸಾಧನೆ ಮಾಡಿದೆ. ಈ ನಿಮ್ಮ ಪ್ರೀತಿಯನ್ನು ನಾನು ಅಭಿವೃದ್ದಿ ಮೂಲಕ ಹಿಂತಿರುಗಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ, ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದ ಬಿಜೆಪಿಯ ಸಮಾವೇಶದಲ್ಲಿ ಹೇಳಿದ್ದಾರೆ. ಇದೇ ಸಂದರ್ಭ ಟಿಎಂಎ ಪೈ, ಹಾಜಿ ಸಾಹೇಬ್, ಎ.ಬಿ ಶೆಟ್ಟಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ ಗಣ್ಯರನ್ನು ಸ್ಮರಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ದೇವಭೂಮಿ ಎಂಬ ಹೆಸರು ಗಳಿಸಿದೆ. ಈ ಮಣ್ಣಿನ ಮಗ ಗುರುರಾಜ್ ಪೂಜಾರಿ ದೇಶಕ್ಕೆ ಪದಕ ಗೆದ್ದು ತಂದಿದ್ದಾನೆ ಎಂದು ಕರಾವಳಿಯನ್ನು ಹೊಗಳಿದ ಮೋದಿ ಕರ್ನಾಟದ ಒಳ್ಳೆತನವನ್ನು ಈಗೀನ ಸರ್ಕಾರ ದಮನ ಮಾಡಿದೆ ಎಂದು ಕಿಡಿಕಾರಿದರು. ಇದೇ ವೇಳೆ ಬಿಜೆಪಿ ಸರ್ಕಾರ ಯುವ ಜನತೆಯ ಭವಿಷ್ಯ ರೂಪಿಸಲು ಪಣ ತೊಟ್ಟಿದ್ದು, ಅಭಿವೃದ್ದಿ ನಮ್ಮ ಗುರಿ ಎಂದರು.
ಈ ಸಂದರ್ಭದಲ್ಲಿ ದೇವೇಗೌಡರನ್ನು ಹಾಡಿ ಹೊಗಳಿದ ಮೋದಿ, ರಾಜಕಾರಣದಲ್ಲಿ ಭಿನ್ನಮತ ಸಾಮಾನ್ಯ. ದೇವೇ ಗೌಡರು ನಮ್ಮ ದೇಶದ ಹಿಂದಿನ ಪ್ರಧಾನಿ. ದೇವೇಗೌಡರು ಈ ದೇಶದ ಹಿರಿಯರು. ಆದರೆ ಕಾಂಗ್ರೆಸ್ನವರು ದೇವೇಗೌಡರನ್ನು ಅವಮಾನಿದ್ದಾರೆ. ಇಂಥ ಕಾಂಗ್ರೆಸ್ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು. ಸಂಸತ್ತಿನಲ್ಲಿ ಅವರು ನನ್ನ ವಿರುದ್ಧ ಮಾತನಾಡುತ್ತಾರೆ, ನಮ್ಮ ವಿರುದ್ಧ ಮತ ಹಾಕುತ್ತಾರೆ, ರಾಜಕಾರಣದಲ್ಲಿ ವಿರೋಧಿಗಳು ನಾವು ಹಾಗೆಂದ ಮಾತ್ರಕ್ಕೆ ಅಗೌರವ ಸಲ್ಲಿಸಬಾರದು ಎಂದು ದೇವೇಗೌಡರನ್ನು ಹೊಗಳಿದರು.
ಭಾಷಣದ ಕೊನೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ ಬನ್ನಿ ಎಲ್ಲರೂ ಕೈ ಜೋಡಿಸಿ ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂದರು .