ಮಂಗಳೂರು, ಮೇ 02: ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುತ್ತಿದ್ದು ಇದು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ರಜೆಯ ಮಜಾದಲ್ಲಿದ್ದ ವಿದ್ಯಾರ್ಥಿಗಳಿಗೆ, ಒಂದು ತಿಂಗಳ ಮೊದಲೇ ತರಗತಿಗಳು ಆರಂಭವಾಗಿದ್ದು, ರಜಾ ಅವಧಿಯನ್ನು ಕಡಿತಗೊಳಿಸಿದ ಪದವಿ ಪೂರ್ವ ಇಲಾಖೆಯ ಕ್ರಮ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರೂ ಅನಿವಾರ್ಯವಾಗಿ ಕಾಲೇಜಿನತ್ತ ಹೆಜ್ಜೆ ಹಾಕಬೇಕಾಗಿದೆ.
ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1 ರಿಂದ ತರಗತಿ ಆರಂಭವಾಗುತ್ತಿದ್ದವು, ಆದರೆ ಈ ಬಾರಿ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿಯನ್ನು ದಿಢೀರ್ ಬದಲಾವಣೆ ಮಾಡಿರುವ ಪಪೂ ಶಿಕ್ಷಣ ಇಲಾಖೆ, ಒಂದು ತಿಂಗಳ ಮೊದಲೇ ಅಂದರೆ ಮೇ ೨ ರಂದು ಪಿಯುಸಿ ತರಗತಿಗಳನ್ನು ಆರಂಭಿಸಲು ಇಲಾಖೆ ಸೂಚಿಸಿದೆ.
ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸುಮಾರು 100 ದಿನಗಳ ರಜೆ ದೊರಕುತ್ತದೆ ಇಷ್ಟು ಸುದೀರ್ಘ ರಜೆಯಿಂದಾಗಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಿದ ವಿಷಯಗಳು ಮರೆಯುವ ಸಾಧ್ಯತೆ ಹೆಚ್ಚು. ಪರಿಷ್ಕೃತ ವೇಳಾಪಟ್ಟಿಯಂತೆ ಉಪನ್ಯಾಸಕರಿಗೂ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡಲು ಹೆಚ್ಚಿನ ಸಮಯಾವಕಾಶ ದೊರೆಯುತ್ತದೆ. ಅಲ್ಲದೆ ಚುನಾವಣೆ ಹಿನ್ನಲೆಯಲ್ಲಿ ಪಥಮ ಪಿಯುಸಿ ಪರೀಕ್ಷೆಗಳನ್ನೂ ನಿಗದಿತ ಅವಧಿಗಿಂತ ಮುಂಚಿತವಾಗಿ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚ್ಚಿನ ರಜೆ ದೊರಕಿದೆ ಎನ್ನುತ್ತದೆ ಪಪೂ ಶಿಕ್ಷಣ ಇಲಾಖೆ.